×
Ad

ಕೊಣಾಜೆ: ಮನೆಯ ಅಡಿಭಾಗದಲ್ಲಿ ಬೃಹತ್ ಗುಹೆ ಪತ್ತೆ

Update: 2016-07-04 19:33 IST

ಕೊಣಾಜೆ, ಜು.4: ಮನೆಯೊಂದರ ಬಳಿ ಮಣ್ಣು ಕುಸಿತ ಉಂಟಾಗಿ ಮನೆಯಡಿ 15 ಅಡಿ ಆಳದ ಬೃಹತ್ ಗುಹೆಯೊಂದು ಪತ್ತೆಯಾದ ಘಟನೆ ಕೊಣಾಜೆ ಗ್ರಾಮದ ಪುಳಿಂಚಾಡಿಯ ಕಲ್ಕಾರ್ ಎಂಬಲ್ಲಿ ನಡೆದಿದೆ. ಮನೆಯು ಕುಸಿಯುವ ಹಂತದಲ್ಲಿದ್ದು ಮನೆಮಂದಿ ಭಯಭೀತರಾಗಿದ್ದಾರೆ.

ಸೋಮವಾರ ಬೆಳಗ್ಗೆ ಸುಮಾರು 7:30ರ ಹೊತ್ತಿಗೆ ಕೊಣಾಜೆ ಕಲ್ಕಾರ್‌ನ ಸದಾಶಿವ ದೇವಾಡಿಗರ ಮನೆಯ ಅಡಿಯಲ್ಲಿ ಈ ಘಟನೆ ಸಂಭವಿಸಿದೆ. ದೇವಾಡಿಗ ಅವರ ಪತ್ನಿ ಪ್ರಭಾವತಿ ಮನೆಯಲ್ಲಿದ್ದ ಸಂದರ್ಭ ಈ ಘಟನೆ ಸಂಭವಿಸಿದ್ದು. ಬಳಿಕ ನೋಡಿದಾಗ ಮಣ್ಣು ಕುಸಿದಿದ್ದು ಮಾತ್ರವಲ್ಲದೆ ಮನೆಯ ಅಡಿ ಭಾಗದಲ್ಲಿ 15 ಅಡಿ ಆಳದಲ್ಲಿ ಬೃಹತ್ ಸುರಂಗವೂ ಪತ್ತೆಯಾಗಿತ್ತು.

ಶೆಡ್ ತೆರವುಗೊಳಿಸಿದ ಸ್ಥಳೀಯರು:

ಸ್ಥಳಕ್ಕೆ ಆಗಮಿಸಿದ ಅಕ್ಕಪಕ್ಕದ ಮನೆಮಂದಿ, ಸ್ಥಳೀಯರು ಶ್ರಮದಾನದ ಮೂಲಕ ಮನೆಗೆ ತಾಗಿಕೊಂಡು ಹಿಂಭಾಗದಲ್ಲಿ ಕುಸಿಯುವ ಹಂತದಲ್ಲಿದ್ದ ಶೆಡ್ ತೆರವುಗೊಳಿಸಿದರು. ಬಳಿಕ ಜೆಸಿಬಿ ಮೂಲಕ ಹೊಂಡವನ್ನು ಮುಚ್ಚಲು ಪ್ರಯತ್ನಿಸಿದರೂ ಸುರಂಗದಿಂದಾಗಿ ಇದು ಸಾಧ್ಯವಾಗಲಿಲ್ಲ. 

ಅತಂತ್ರವಾದ ಕುಟುಂಬ

ಪುಳಿಂಚಾಡಿಯ ಸದಾಶಿವ ದೇವಾಡಿಗ ಮಂಗಳೂರು ವಿವಿಯಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ನಿರ್ವಹಿಸುತ್ತಿದ್ದು, ಪತ್ನಿ ಪ್ರಭಾವತಿ ದೇರಳಕಟ್ಟೆಯ ಖಾಸಗಿ ಕಾಲೇಜೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರು. ಕಳೆದ ಮೂರು ವರ್ಷದ ಹಿಂದೆಯಷ್ಟೇ ಇಲ್ಲಿ ಮನೆ ನಿರ್ಮಿಸಿದ್ದರು. ಒಂದೂವರೆ ತಿಂಗಳ ಹಿಂದೆ ಮುಡಿಪು ಬಳಿ ಬೈಕ್ ಸ್ಕಿಡ್ ಆದ ಪರಿಣಾಮ ಗಂಭೀರ ಗಾಯಗೊಂಡು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಸೋಮವಾರ ಆಸ್ಪತ್ರೆಯಿಂದ ಮನೆಗೆ ಬರುವವರಿದ್ದರು. ಆದರೆ ಇದೀಗ ಮನೆಯಡಿಯಲ್ಲಿ ಕಂದಕ ಸೃಷ್ಟಿಯಾಗಿ ಮನೆಯೇ ಬೀಳುವ ಸ್ಥಿತಿಯಲ್ಲಿರುವುದು ಬಡ ಕುಟುಂಬವನ್ನು ಆತಂಕಕ್ಕೀಡು ಮಾಡಿದೆ.

ಸ್ಥಳಕ್ಕೆ ಕೊಣಾಜೆ ಎಸೈ ಕೆ. ಸುಧಾಕರ್, ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಅಲಿ, ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೇಶವ, ಗ್ರಾಮ ಲೆಕ್ಕಿಗ ಪ್ರಸಾದ್, ಪಂಚಾಯತ್ ಸದಸ್ಯರು ಭೇಟಿ ಕೊಟ್ಟಿದ್ದು ಮನೆಮಂದಿಯನ್ನು ಸಮಾಧಾನಿಸುವುದರ ಜೊತೆಗೆ ಶ್ರಮದಾನದಲ್ಲಿಯೂ ತೊಡಗಿಸಿಕೊಂಡು ಸಹಕರಿಸಿದ್ದಾರೆ. 

ಅಕ್ಕಪಕ್ಕದ ಮನೆಯವರಿಗೂ ಆತಂಕ

ಸದಾಶಿವ ದೇವಾಡಿಗರ ಮನೆಯ ಅಡಿಯಲ್ಲಿ ಗುಹೆಯ ರೀತಿಯಲ್ಲಿ ಕಂದಕ ಪತ್ತೆಯಾಗುತ್ತಿದ್ದಂತೆ ಅಕ್ಕ ಪಕ್ಕದ ಮನೆಯವರಿಗೂ ಆತಂಕ ಸೃಷ್ಟಿಯಾಗಿದೆ. ಪತ್ತೆಯಾಗಿರುವ ಸುರಂಗದ ವ್ಯಾಪ್ತಿ ಇನ್ನೂ ವಿಸ್ತರಿಸಿರಬಹುದು ಎಂಬ ಆತಂಕವನ್ನು ಅಕ್ಕಪಕ್ಕದ ಮನೆಯವರೂ ವ್ಯಕ್ತಪಡಿಸುತ್ತಿದ್ದಾರೆ.

ಮನೆಯಡಿಯಲ್ಲಿ ಕುಸಿತದಿಂದ ಉಂಟಾದ ಹೊಂಡವನ್ನು ಜೆಸಿಬಿ ಯಂತ್ರ ತರಿಸಿ ಮಣ್ಣು ಹಾಕಿ ಮುಚ್ಚಲು ಪ್ರಯತ್ನಿಸಿದೆವು. ಆದರೆ ಬೃಹತ್ ಸುರಂಗ ಇರುವುದರಿಂದ ಮಣ್ಣು ಹಾಕಿ ಅದನ್ನು ಮುಚ್ಚುವುದು ಸಾಧ್ಯವಾಗಿಲ್ಲ.

ಶೌಕತ್ ಅಲಿ, ಕೊಣಾಜೆ ಗ್ರಾ.ಪಂ.ಅಧ್ಯಕ್ಷರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News