ಬಿಹಾರ ಪರೀಕ್ಷೆ ವಂಚನೆ ಪ್ರಕರಣ: ಕ್ಲಾಸ್ 12 ‘ಟಾಪರ್’ ಅಪ್ರಾಪ್ತ ವಯಸ್ಕೆ ಎಂಬ ವಾದ ಒಪ್ಪಿಕೊಂಡ ನ್ಯಾಯಾಲಯ
ಪಟ್ನಾ,ಜು.4: ಪರೀಕ್ಷೆ ವಂಚನೆ ಜಾಲಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಬಿಹಾರ ಇಂಟರ್‌ಮೀಡಿಯೇಟ್ ಪರೀಕ್ಷೆಯ ‘ಅಗ್ರಸ್ಥಾನಿ’ ವಿದ್ಯಾರ್ಥಿನಿ ಅಪ್ರಾಪ್ತ ವಯಸ್ಕಳು ಎನ್ನುವುದನ್ನು ಇಲ್ಲಿಯ ಜಿಲ್ಲಾ ನ್ಯಾಯಾಲಯವು ಸೋಮವಾರ ಒಪ್ಪಿಕೊಂಡಿತು.
ಜನ್ಮದಿನಾಂಕ 1998,ನವೆಂಬರ್ 15 ಎಂದು ಉಲ್ಲೇಖಿಸಲಾಗಿರುವ ಬಾಲಕಿಯ ಮೆಟ್ರಿಕ್ ಪರೀಕ್ಷೆಯ ಪ್ರಮಾಣಪತ್ರದ ಆಧಾರದಲ್ಲಿ ಆಕೆ ಅಪ್ರಾಪ್ತ ವಯಸ್ಕಳಾಗಿದ್ದಾಳೆ ಎಂಬ ಅಂಶವನ್ನು ವಿಶೇಷ ಜಾಗೃತ ನ್ಯಾಯಾಲಯದ ನ್ಯಾಯಾಧೀಶ ರಾಘವೇಂದ್ರ ಕುಮಾರ ಸಿಂಗ್ ಅವರು ಒಪ್ಪಿದರು. ಇದು ಆಕೆಯನ್ನು ಬೇವೂರು ಮಾದರಿ ಜೈಲಿನಿಂದ ರಿಮಾಂಡ್ ಹೋಮ್‌ಗೆ ಸ್ಥಳಾಂತರಿಸಲು ಅವಕಾಶ ಕಲ್ಪಿಸಿದೆ.
ಹ್ಯುಮಾನಿಟೀಸ್‌ನಲ್ಲಿ ಅಗ್ರಸ್ಥಾನ ಪಡೆದಿದ್ದ ಬಾಲಕಿ ಮತ್ತು ವಿಜ್ಞಾನ ವಿಭಾಗದಲ್ಲಿ ಟಾಪರ್ ಆಗಿದ್ದ ವಿದ್ಯಾರ್ಥಿ ಸುದ್ದಿಗಾರರು ತಮ್ಮ ವಿಷಯಗಳಿಗೆ ಸಂಬಂಧಿಸಿದಂತೆ ಕೇಳಿದ್ದ ಸರಳಪ್ರಶ್ನೆಗಳಿಗೆ ಹಾಸ್ಯಾಸ್ಪದ ಉತ್ತರಗಳನ್ನು ಕೊಟ್ಟಾಗ ಪರೀಕ್ಷೆಯಲ್ಲಿ ವಂಚನೆ ನಡೆದಿದೆ ಎನ್ನುವುದು ಬೆಳಕಿಗೆ ಬಂದಿತ್ತು. ಈ ಸಂದರ್ಶನದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸರಕಾರವು ವಿಚಾರಣೆಗೆ ಆದೇಶಿಸುವಂತೆ ಮಾಡಿತ್ತು.
ಜೂ.25ರಂದು ಬಿಹಾರ ಶಾಲಾ ಪರೀಕ್ಷಾ ಮಂಡಳಿ(ಬಿಎಸ್‌ಇಬಿ)ಯ ಕಚೇರಿಯಲ್ಲಿ ಮರುಪರೀಕ್ಷೆ ಬರೆದು ಹೊರಬರುತ್ತಿದ್ದಾಗ ಬಾಲಕಿಯನ್ನು ಬಂಧಿಸಲಾಗಿತ್ತು. ಮೆಟ್ರಿಕ್ ಪರೀಕ್ಷೆಯ ಪ್ರಮಾಣಪತ್ರದಂತೆ ಆಕೆಯ ವಯಸ್ಸು 17ವರ್ಷ,ಮೂರು ತಿಂಗಳು ಮತ್ತು ಒಂಬತ್ತು ದಿನಗಳಾಗಿರುವುದರಿಂದ ಆಕೆಯನ್ನು ಜೈಲಿಗೆ ಕಳುಹಿಸುವಂತಿಲ್ಲ.
ಬಾಲಕಿಯ ಪರವಾಗಿ ನ್ಯಾಯಾಲಯದಲ್ಲಿ ಹಾಜರಾಗಿದ್ದ ಬಾಲನ್ಯಾಯ ಮಂಡಳಿಯ ಮಾಜಿ ಸದಸ್ಯ ಕೆ.ಡಿ.ಮಿಶ್ರಾ ಅವರು ಆಕೆಯ ಮೆಟ್ರಿಕ್ ಪ್ರಮಾಣಪತ್ರವನ್ನು ಸಲ್ಲಿಸಿದ್ದು, ಆಕೆ ಅಪ್ರಾಪ್ತ ವಯಸ್ಕಳಾಗಿದ್ದಾಳೆ ಎಂಬ ವಾದಕ್ಕೆ ಬಿಎಸ್‌ಇಬಿಯ ವಕೀಲರು ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ.