ಕುತ್ತಾರು: ಸಾರ್ವಜನಿಕ ಸ್ಥಳದಲ್ಲಿ ಯುವತಿಯ ರಾದ್ಧಾಂತ

Update: 2016-07-04 14:49 GMT

ಉಳ್ಳಾಲ, ಜು.4: ಕುತ್ತಾರು ರಾಜರಾಜೇಶ್ವರಿ ದೇವಸ್ಥಾನದ ಸಮೀಪ ಸಾರ್ವಜನಿಕವಾಗಿ ಸಿಗರೇಟು ಮೂಲಕ ಮಾದಕ ಪದಾರ್ಥ ಸೇವಿಸಿ ನಶೆ ಏರಿಸಿಕೊಂಡಂತೆ ವರ್ತಿಸುತ್ತಿದ್ದ ಯುವತಿಯೋರ್ವಳು ಸುಮಾರು ಒಂದು ತಾಸಿಗಿಂತಲೂ ಅಧಿಕ ಸಮಯ ಸಾರ್ವಜನಿಕರೊಂದಿಗೆ ರಾದ್ಧಾಂತ ನಡೆಸಿದ ಪ್ರಸಂಗ ಸೋಮವಾರ ನಡೆದಿದೆ. ಯುವತಿಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಬಳಿಕ ಪೋಷಕರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.
 
ದ್ವಿಚಕ್ರ ವಾಹನದಲ್ಲಿ ಬಂದಿದ್ದ ಯವತಿ ನಶೆಯಲ್ಲಿದ್ದ ಹಾಗೆ ವರ್ತಿಸಿ ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯಲಾರಂಭಿಸಿದ್ದಳು. ಈ ಬಗ್ಗೆ ಸ್ಥಳೀಯರು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಬಂದಾಗ ಯುವತಿಯು ಕುತ್ತಾರಿನ ರಾಜರಾಜೇಶ್ವರೀ ದೇವಸ್ಥಾನದೊಳಗೆ ಚಪ್ಪಲಿ ಹಾಕಿಕೊಂಡೇ ಒಳನಡೆಯಲು ಯತ್ನಿಸಿದ್ದು, ಜನರು ತಡೆದು ಬುದ್ಧಿವಾದ ಹೇಳಿದ್ದರು. ಆಗ ಕೆರಳಿದ ಯುವತಿ ಪೊಲೀಸರು ಸೇರಿ ನೆರೆದವರನ್ನೆಲ್ಲರನ್ನು ಹೈಕೋರ್ಟ್ ಮೆಟ್ಟಿಲೇರಿಸುತ್ತೇನೆಂದು ಹೇಳಿ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ.

ಯುವತಿಯ ರಾದ್ಧಾಂತ ಹೆಚ್ಚಾಗುತ್ತಿದ್ದಂತೆ ಸ್ಥಳದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಸ್ಥಳೀಯ ಇಬ್ಬರು ಮಹಿಳೆಯರ ಸಹಕಾರದಿಂದ ಯುವತಿಯನ್ನು ಪೊಲೀಸ್ ವಾಹನದಲ್ಲಿ ಕುಳ್ಳಿರಿಸಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪೊಲೀಸರು ಆಕೆಯನ್ನು ಪೋಷಕರೊಂದಿಗೆ ಕಳುಹಿಕೊಟ್ಟಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News