ಗಲಾಟೆ ತಡೆಯಲು ಬಂದ ಪೊಲೀಸರ ಮೇಲೆಯೇ ತಾಯಿ-ಮಗನಿಂದ ಹಲ್ಲೆ
ಬೈಂದೂರು, ಜು.4: ಗಲಾಟೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಹಿಡಿಯಲು ಹೋದ ಬೈಂದೂರು ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗಳಿಗೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಘಟನೆ ಜು.3ರಂದು ಸಂಜೆ ವೇಳೆ ತಗ್ಗರ್ಸೆ ಗ್ರಾಮ ನೆಲ್ಯಾಡಿ ಅರಳಿಕಟ್ಟೆ ಎಂಬಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನು ಪೊಲೀಸ್ ಸಿಬ್ಬಂದಿ ಉದಯ ಕುಮಾರ್ ಹಾಗೂ ನಾಗೇಶ್ ಎಂದು ಗುರುತಿಸಲಾಗಿದೆ.
ಅರಳಿಕಟ್ಟೆಯ ರಾಘವೇಂದ್ರ ಶೆಟ್ಟಿ ಎಂಬಾತ ತನ್ನ ಮನೆಯ ಬಳಿ ಗಲಾಟೆ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಉದಯ ಕುಮಾರ್ ಹಾಗೂ ನಾಗೇಶ್ ಸ್ಥಳಕ್ಕೆ ತೆರಳಿದ್ದರು. ಅಲ್ಲಿ ಕೈಯಲ್ಲಿ ಮರದ ಕೋಲನ್ನು ಹಿಡಿದುಕೊಂಡು ನಿಂತಿದ್ದ ರಾಘವೇಂದ್ರ ಶೆಟ್ಟಿಯನ್ನು ವಿಚಾರಿಸಿದಾಗ ಆತ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿದನು.
ಆಗ ಮನೆಯಿಂದ ಮರದ ಕೋಲನ್ನು ಹಿಡಿದುಕೊಂಡು ಬಂದ ಆತನ ತಾಯಿ ಪೊಲೀಸರ ಮೇಲೆ ಹಲ್ಲೆ ನಡೆಸಿದರು. ನಂತರ ರಾಘವೇಂದ್ರ ತನ್ನ ತಾಯಿಯನ್ನು ಹಿಡಿದು ಆಕೆಯೊಂದಿಗೆ ಓಡಿ ಹೋಗಲು ಯತ್ನಿಸಿದಾಗ ಆಕೆ ನೆಲಕ್ಕೆ ಬಿದ್ದು ಗಾಯಗೊಂಡಿದ್ದರು. ರಾಘವೇಂದ್ರ ತಪ್ಪಿಸಿಕೊಂಡು ಹುಲುವಾಡಿ ಕಡೆ ಪರಾರಿಯಾದನು. ಹಲ್ಲೆಯಿಂದ ಉದಯ ಕುಮಾರ್ ಗಾಯಗೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.