‘ಈದುಲ್ ಫಿತ್ರ್ ಪ್ರೀತಿ ಮತ್ತು ಸಹೋದರತೆಯನ್ನು ಸಾರುವ ಹಬ್ಬ’
ಮಂಗಳೂರು,ಜು.4: ಈದುಲ್ ಫಿತ್ರ್ ಪ್ರೀತಿ ಮತ್ತು ಸಹೋದರತೆಯನ್ನು ಸಾರುವ ಹಬ್ಬವಾಗಿದೆ. ಎಲ್ಲಾ ಧರ್ಮಿಯ ಸಹೋದರರ ನಡುವೆ ಪ್ರೀತಿ,ವಿಶ್ವಾಸ,ಭ್ರಾತೃತ್ವ ಸುದೃಢವಾಗಲು, ನಮ್ಮ ಸೌಹಾರ್ದತೆಯ ಪರಂಪರೆಯನ್ನು ಇನ್ನಷ್ಟು ಬಲಪಡಿಸಲು ಈದ್ ನಮಗೆ ಪ್ರೇರಣೆಯಾಗಲಿ ಎಂದು ಜಮಾಅತೇ ಇಸ್ಲಾಮಿ ಹಿಂದ್ ಮಂಗಳೂರು ಅಧ್ಯಕ್ಷ ಮುಹಮ್ಮದ್ ಕುಂಞಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಒಂದು ತಿಂಗಳ ಕಠಿಣ ಉಪವಾಸದ ಸಮಾರೋಪವಾಗಿದೆ ಈದುಲ್ ಫಿತ್ರ್. ಹಸಿವು-ದಾಹ, ಲೈಂಗಿಕ ಆಸಕ್ತಿ, ನಿದ್ದೆ ಇವೆಲ್ಲವುಗಳ ಮೇಲಿನ ನಿಯಂತ್ರಣ ಉಪವಾಸದ ಉದ್ದೇಶವಾಗಿದೆ. ಸ್ವಚ್ಛ ನಾಲಗೆ ಮತ್ತು ಸ್ವಚ್ಛ ಮನಸ್ಸು ಉಪವಾಸದ ಗುರಿಯಾಗಿದೆ. ವಿವೇಕ, ಸಹನೆ, ಉಪವಾಸದ ಪಾಠಗಳಾಗಿವೆ. ದುರ್ಬಲರ ಮತ್ತು ಹಕ್ಕು ವಂಚಿತರ ದುಃಖ ಮತ್ತು ಬವಣೆಗಳನ್ನು ಅರಿಯುವ ಸಂದರ್ಭವೂ ಆಗಿದೆ.
ಒಂದು ತಿಂಗಳ ಉಪವಾಸದ ತರಬೇತಿಯ ಕೊನೆಯಲ್ಲಿ ಆಚರಿಸಲ್ಪಡುವ ಈದುಲ್ ಫಿತ್ರ್ ಬದುಕನ್ನು ಸುಧಾರಿಸಲು ಮತ್ತು ಕ್ರಮಬದ್ಧಗೊಳಿಸಲು ನಮಗೆ ಪ್ರೇರಣೆಯಾಗಲಿ ಎಂದು ತಿಳಿಸಿದ್ದಾರೆ.
ಈದ್ ನಮ್ಮೆಲ್ಲರ ಹೃದಯಗಳನ್ನು ಜೋಡಿಸಲಿ. ನಮ್ಮ ನಾಡಿನ ಉತ್ತಮ ನಾಳೆಗಾಗಿ, ನೈತಿಕ ಸಮಾಜದ ನಿರ್ಮಾಣಕ್ಕಾಗಿ ಒಂದುಗೂಡಿ ಕ್ರಿಯಾಶೀಲರಾಗಲು ಈದ್ ನಮಗೆ ಶಕ್ತಿ ನೀಡಲಿ. ಪ್ರೀತಿ ಬತ್ತಿ ಹೋಗುತ್ತಿರುವ ಜಗತ್ತಿನಲ್ಲಿ ಈದುಲ್ ಫಿತ್ರ್ ಪ್ರೀತಿಯ, ಭ್ರಾತೃತ್ವದ ಅಲೆಗಳನ್ನು ಸೃಷ್ಟಿಸಲಿ. ದೇವನ ಅನುಗ್ರಹ ನಮ್ಮೆಲ್ಲರ ಮೇಲಿರಲಿ ಎಂದು ತಿಳಿಸಿದ ಅವರು ದ.ಕ. ಜಿಲ್ಲೆಯ ಸಮಸ್ತ ಜನತೆಗೆ ಈದುಲ್ ಫಿತ್ರ್ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.