×
Ad

ಆಳ್ವಾಸ್ ಪ್ರಗತಿ’ ಉದ್ಯೋಗಮೇಳ ಸಂಪನ್ನ

Update: 2016-07-05 00:13 IST

ಮೂಡುಬಿದಿರೆ, ಜು.4: ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ಆವರಣದಲ್ಲಿ ಎರಡು ದಿನಗಳ ಕಾಲ ನಡೆದ 7ನೆ ವರ್ಷದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳ- 2016 ಸಮಾಪನಗೊಂಡಿದ್ದು, ಒಟ್ಟು 4,744 ಅಭ್ಯರ್ಥಿಗಳು ಆಯ್ಕೆಯಾ ಗಿದ್ದರೆ, 1,209 ಅಭ್ಯರ್ಥಿಗಳು ನೇರ ನೇಮಕ ಗೊಂಡಿದ್ದಾರೆ.
 
ಉತ್ಪಾದನಾ ಕ್ಷೇತ್ರ, ಮಾಹಿತಿ ತಂತ್ರಜ್ಞಾನ, ದೂರಸಂಪರ್ಕ, ಆರೋಗ್ಯ, ಫಾರ್ಮಸಿ, ಶಿಕ್ಷಣ, ಮಾರಾಟ ಕ್ಷೇತ್ರ ಮೊದಲಾದ ಕ್ಷೇತ್ರಗಳಿಂದ ಉದ್ಯೋಗ ಮೇಳದಲ್ಲಿ 309 ಕಂಪೆನಿಗಳು ಭಾಗವಹಿ ಸಿದ್ದವು. ಒರೇಕಲ್, ಐಬಿಎಂ, ಟಿಸಿಎಸ್, ಅಮೆಝಾನ್, ಎನ್‌ಎಂಸಿ, ಯುಎಇ ಎಕ್ಸ್‌ಚೆಂಜ್, ಅದಾನಿ ಗ್ರೂಪ್, ಟೆಕ್ ಮಹೀಂದ್ರ, ತಾಜ್‌ಗ್ರೂಪ್, ಐಸಿಐಸಿಐ ಬ್ಯಾಂಕ್, ಟಿವಿಎಸ್, ಎಂಫಸಿಸ್, ಸ್ಟ್ಯಾಂಡರ್ಡ್ ಚಾರ್ಟರ್ಡ್, ಆಕ್ಸಿಸ್ ಬ್ಯಾಂಕ್, ಕಿರ್ಲೋಸ್ಕರ್ ಎಲೆಕ್ಟ್ರಿಕ್, ಏರ್‌ಟೆಲ್, ಐಡಿಯಾ, ವೊಡಾಫೋನ್, ರಿಲಾಯನ್ಸ್, ಸುಝ್ಲ್‌ನ್, ಏಜೀಸ್, ಎಚ್‌ಡಿಎಫ್‌ಸಿ, ಕ್ಯಾಪ್‌ಜೆಮಿನಿ, ಜೆನಿಸಿಸ್ ಸಾಫ್ಟ್‌ವೇರ್, ನಾರಾಯಣ ಹೃದಯಾಲಯ, ವೊಕಾರ್ಟ್, ಬೋದ್‌ಟೆಕ್, ಇನ್ಫೋಸಿಸ್ ಬಿಪಿಒ, ಕೋಡ್‌ಕ್ರಾಫ್ಟ್, ಎಜೆ ಹಾಸ್ಪಿಟಲ್, ಐಎಂ ವಿಂಡ್‌ಮಿಲ್, ಕೆಟಿಟಿಎಂ, ಅಸೀಂ ಸಾಫ್ಟ್ ನೆಟ್ ಕಂಪೆನಿ ಸಹಿತ 309 ವಿವಿಧ ಕಂಪೆನಿಗಳು ಸಂದರ್ಶನ ನಡೆಸಿದವು.

ಟೆಕ್‌ಮಹೀಂದ್ರ 321 ಅಭ್ಯರ್ಥಿ ಗಳನ್ನು ನೇಮಿಸಿದ್ದು, 1.5-12 ಲಕ್ಷ ರೂ. ವೇತನ ನಿಗದಿಪಡಿಸಿದೆ. ಅಮೆಝಾನ್ ಕಂಪೆನಿ ಒಟ್ಟು 116 ಅಭ್ಯರ್ಥಿಗಳನ್ನು ನೇಮಿಸಿಕೊಂಡಿದ್ದು, ವಾರ್ಷಿಕ 2.2-3 ಲಕ್ಷ ರೂ. ಮೊತ್ತದ ವೇತನ, ಯುಎಇ ಎಕ್ಸ್‌ಚೇಂಜ್ ನೇಮಕಗೊಳಿಸಿದ 13 ಅಭ್ಯರ್ಥಿಗಳಿಗೆ ವಾರ್ಷಿಕ 9 ಲಕ್ಷ ರೂ. ವೇತನ ನಿಗದಿಪಡಿಸಿದೆ. ನಾರಾಯಣ ಹೃದಯಾಲಯ 76 ಅಭ್ಯರ್ಥಿಗಳನ್ನು ನೇಮಕಗೊಳಿಸಿ, 1.5-5 ಲಕ್ಷ ರೂ. ವೇತನ, ಸ್ಟಾಂಡರ್ಡ್ ಚಾರ್ಟರ್ಡ್ 140 ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿ, 1.8-3.5 ಲಕ್ಷ ರೂ. ವೇತನ ನಿಗದಿ ಪಡಿಸಿದೆ. ಎನ್‌ಎಂಸಿ 13 ಅಭ್ಯರ್ಥಿ ಗಳನ್ನು ಆಯ್ಕೆ ಮಾಡಿ, 6-6.5 ಲಕ್ಷ ರೂ. ವಾರ್ಷಿಕ ವೇತನ ಅವಕಾಶ ನೀಡಿದೆ. ಟೆಸ್ಕೋ 69 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ 2.6 ಲಕ್ಷ ರೂ. ವಾರ್ಷಿಕ ವೇತನ, ಬೋಧ್ ಟೆಕ್ನಾಲಜೀಸ್ 11 ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿ 1.75-9 ಲಕ್ಷ ರೂ. ವಾರ್ಷಿಕ ವೇತನದ ಭರವಸೆ ನೀಡಿದೆ. ಈ ವರ್ಷದ ಉದ್ಯೋಗ ಮೇಳದಲ್ಲಿ ಆನ್‌ಲೈನ್ ನೋಂದಣಿ ವ್ಯವಸ್ಥೆ ಕಲ್ಪಿಸಿದ್ದು, ಉದ್ಯೋಗಕಾಂಕ್ಷಿಗಳಿಗೆ ಅನುಕೂಲವಾಯಿತು. ಆಳ್ವಾಸ್ ಪ್ರಗತಿ 2016ಕ್ಕಾಗಿ ಅಭಿವೃದ್ಧಿಪಡಿಸಿದ ಮೊಬೈಲ್ ಆ್ಯಪ್ ಅಭ್ಯರ್ಥಿಗಳಿಗೆ ತಮ್ಮ ಅರ್ಹತೆಗೆ ಅನುಗುಣವಾಗಿ ಇರುವ ಅವಕಾಶಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿತು. ಪ್ರಗತಿ ವೆಬ್‌ಸೈಟ್ ಭಾಗವಹಿಸುವ ಕಂಪೆನಿಗಳು, ಅವಕಾಶಗಳು, ಆಯ್ಕೆ ಪ್ರಕ್ರಿಯೆ, ಉದ್ಯೋಗ ಸ್ಥಳ ಇತ್ಯಾದಿ ಕುರಿತು ಮುಂಗಡ ಮಾಹಿತಿ ನೀಡಿತು.

ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಪದವಿ ವಿಭಾಗದ ಅಭ್ಯರ್ಥಿಗಳಿಗೆ ವಿದ್ಯಾಗಿರಿಯ ಮುಖ್ಯ ಆವರಣ (ಬ್ಲಾಕ್) ಹಾಗೂ ಎಸೆಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಅಭ್ಯರ್ಥಿಗಳಿಗೆ ಪದವಿ ಕಟ್ಟಡವನ್ನು ನಿಗದಿಪಡಿಸಲಾಗಿತ್ತು. ಕ್ಲಾರಿಟಿ ವಾಲ್, ಉದ್ಯೋಗ ಮಾಹಿತಿ ಕೇಂದ್ರ ಹಾಗೂ ಡಿಜಿಟಲ್ ಡಿಸ್‌ಪ್ಲೇ ವ್ಯವಸ್ಥೆಗಳು ಅಭ್ಯರ್ಥಿಗಳಿಗೆ ಸ್ಪಷ್ಟ ಮಾಹಿತಿ ನೀಡುವುದರೊಂದಿಗೆ ಉದ್ಯೋಗ ಮೇಳ ಸುಸೂತ್ರವಾಗಿ ಸಾಗಲು ಅನುವು ಮಾಡಿಕೊಟ್ಟಿತು.

ಗ್ರಾಮೀಣ ಪ್ರದೇಶದ ಯುವ ಉದ್ಯೋಗ ಆಕಾಂಕ್ಷಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳನ್ನು ನೀಡುವುದು ಈ ಉದ್ಯೋಗ ಮೇಳದ ಪ್ರಮುಖ ಉದ್ದೇಶವಾಗಿತ್ತು. ಸುಮಾರು ಏಳು ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದ ಯುವಜನತೆಗೆ ಉದ್ಯೋಗದ ಮಾಹಿತಿ ಹಾಗೂ ಅವಕಾಶವನ್ನು ತೆರೆದಿಡುವ ನಿಟ್ಟಿನಲ್ಲಿ ಆಳ್ವಾಸ್ ಪ್ರಗತಿ ಫಲಪ್ರದವಾಗಿದೆ. 10,864 ಮಂದಿ ಆನ್‌ಲೈನ್ ಹಾಗೂ 1,974 ಮಂದಿ ಸ್ಥಳದಲ್ಲೇ ನೋಂದಣಿ ಮಾಡಿಸಿಕೊಂಡಿದ್ದರು. ನೋಂದಣಿ ಮಾಡಿದ್ದ 12,838 ಮಂದಿಯಲ್ಲಿ 12023 ಅಭ್ಯರ್ಥಿಗಳು ಭಾಗವಹಿಸಿರುವುದು ವಿಶೇಷ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News