ಈದುಲ್ ಫಿತ್ರ್ ಪ್ರಯುಕ್ತ ಬಂಟ್ವಾಳದಲ್ಲಿ ಪೊಲೀಸ್ ಶಾಂತಿ ಸಭೆ
ವಿಟ್ಲ, ಜು.5: ಈದುಲ್ ಫಿತ್ರ್ ಹಬ್ಬದ ಪ್ರಯುಕ್ತ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಯಾರಿಗೂ ಶಾಂತಿ ಸಭೆಯು ಭಾನುವಾರ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ, ಎಸ್ಸೈಗಳಾದ ರಕ್ಷಿತ್ ಎ ಕೆ ಹಾಗೂ ನಂದಕುಮಾರ್ ಅವರ ಉಪಸ್ಥಿತಿಯಲ್ಲಿ ನಡೆದಿದ್ದು, ಸಾರ್ವತ್ರಿಕ ಟೀಕೆಗೆ ಗುರಿಯಾಗಿದೆ.
ಪ್ರತೀ ಬಾರಿಯೂ ಹಬ್ಬ-ಹರಿದಿನ ಸಹಿತ ವಿಶೇಷ ಸಂದರ್ಭಗಳಲ್ಲಿ ಬಿ.ಸಿ ರೋಡಿನ ನಗರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯುತ್ತಿತ್ತು. ಈ ಸಂದರ್ಭ ಸ್ವತಃ ಠಾಣಾಧಿಕಾರಿ ಅಥವಾ ಸಿಬ್ಬಂದಿಗಳು ಉಭಯ ಕೋಮಿನ ಮುಖಂಡರಿಗೆ ಹಾಗೂ ಪತ್ರಕರ್ತರಿಗೆ ಮಾಹಿತಿ ರವಾನಿಸುತ್ತಿದ್ದರು. ಆದರೆ ಈ ಬಾರಿ ಮಾತ್ರ ಶಾಂತಿ ಸಭೆ ಬಂಟ್ವಾಳದಲ್ಲಿರುವ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದೆ ಮಾತ್ರವಲ್ಲ ಸಾರ್ವಜನಿಕರಿಗಾಗಲೀ, ಉಭಯ ಕೋಮಿನ ಮುಖಂಡರಿಗಾಗಲೀ ಅಥವಾ ಮಾಧ್ಯಮ ಪ್ರತಿನಿಧಿಗಳಾಗಲೀ ಯಾವುದೇ ಮಾಹಿತಿ ಇರಲಿಲ್ಲ. ಕೇವಲ ಕೆಲವೊಂದು ಪೊಲೀಸ್ ಸ್ನೇಹ ಬೆಳೆಸಿಕೊಂಡಿರುವ ಬ್ರೋಕರ್ ಗಳು ಹಾಗೂ ಸಾಮಾಜಿಕ ಅಶಾಂತಿ ಸೃಷ್ಟಿಸುವ ಕೋಮುವಾದಿ ಸಂಘಟನೆಗಳ ಪ್ರಮುಖರನ್ನೇ ಸಭೆಗೆ ಕರೆಸಲಾಗಿತ್ತು. ಆದರೂ ಸಭೆಗೆ ಸಾರ್ವಜನಿಕ ಹಾಜರಾತಿ ತೀರಾ ಕಡಿಮೆಯಿದ್ದು, ನೀರಸವಾಗಿ ಅಂತ್ಯಗೊಂಡಿದೆ ಎನ್ನಲಾಗಿದೆ.
ಶಾಂತಿಸಭೆ ಹಿನ್ನೆಲೆಯಲ್ಲಿ ಪರಿಸರದ ಕೆಲವೊಂದು ಮಸೀದಿ, ದೇವಸ್ಥಾನ ಹಾಗೂ ಚರ್ಚ್ಗಳ ಮುಖಂಡರ ದೂರವಾಣಿ ಸಂಖ್ಯೆಗಳನ್ನು ಪತ್ರಕರ್ತರ ಮುಖಾಂತರವೇ ಸಂಗ್ರಹಿಸುವ ಪೊಲೀಸರು ಕನಿಷ್ಠ ಪಕ್ಷ ಮಾಧ್ಯಮ ಪ್ರತಿನಿಧಿಗಳಿಗೂ ಶಾಂತಿಸಭೆ ಆಯೋಜಿಸುವ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಬಳಿಕ ಕಾಂಟ್ರಾಕ್ಟ್ ಬೇಸ್ ಫೋಟೋಗ್ರಾಫರ್ ಅಥವಾ ಪತ್ರಕರ್ತರನ್ನು ಕರೆಸಿ ಎಲ್ಲ ಪತ್ರಿಕೆಗಳಿಗೂ ಸುದ್ದಿ ರವಾನಿಸಿದ್ದಾರೆ.