ಫಸಲ್‌ಬಿಮಾ ಯೋಜನೆ ಕುರಿತು ಸಂಸದರಿಂದ ಪರಿಶೀಲನೆಯ ಭರವಸೆ
ಸುಳ್ಯ, ಜು.5: ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳವಾರ ಸುಳ್ಯಕ್ಕೆ ಆಗಮಿಸಿ, ನಿರೀಕ್ಷಣಾ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಸುಳ್ಯ ಜಯನಗರದ ಮಿಲಿಟರಿ ಗ್ರೌಂಡ್ ಸಮಸ್ಯೆ ಪರಿಹರಿಸುವಂತೆ ಜಗನ್ನಾಥ ಜಯನಗರ ಮನವಿ ಸಲ್ಲಿಸಿದರು. ತಹಶೀಲ್ದಾರ್ ಅನಂತ ಶಂಕರ ಅವರನ್ನು ಕರೆಸಿ ಈ ಕುರಿತು ಮಾಹಿತಿ ಪಡೆದ ಸಂಸದರು, ಜಿಲ್ಲಾಧಿಕಾರಿಗೆ ವರದಿ ನೀಡುವಂತೆ ಸೂಚಿಸಿದರು. ಮಿಲಿಟರಿ ಗ್ರೌಂಡ್, ಗೋಮಾಳ, ಡಿಸಿ ಮನ್ನಾ ಜಮೀನುಗಳಲ್ಲಿ ಮನೆ ಕಟ್ಟಿಕೊಂಡು ವಾಸವಿರುವ ಸಾವಿರಾರು ಜನರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಈ ಸಮಸ್ಯೆ ಕುರಿತು ಅಧ್ಯಯನ ನಡೆಸಿ ರಾಜ್ಯದ ಕಂದಾಯ ಸಚಿವರಿಗೆ ಸಲ್ಲಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡುವುದಾಗಿ ಅವರು ಹೇಳಿದರು.
ಸಂಪಾಜೆಯಲ್ಲಿ ಬಿಎಸ್ಸೆನ್ನೆಲ್ ಹಾಗೂ 33 ಕೆವಿ ವಿದ್ಯುತ್ ಸಬ್‌ಸ್ಟೇಶನ್ ಕುರಿತು ಪಂಚಾಯತ್ ಸದಸ್ಯ ಜಿ.ಕೆ. ಹಮೀದ್ ಮನವಿ ಸಲ್ಲಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ನಗರ ಪಂಚಾಯತ್ ಸದಸ್ಯ ಎನ್.ಎ.ರಾಮಚಂದ್ರ, ಮುಖಂಡರಾದ ಎನ್.ಎ.ಸುಂದರ, ನವೀನ್ ಕುಮಾರ್ ಮೇನಾಲ, ಪಿ.ಕೆ.ಉಮೇಶ್, ಸುದರ್ಶನ ಪಾತಿಕಲ್ಲು ಮೊದಲಾದವರಿದ್ದರು.
ಫಸಲ್‌ಬಿಮಾ ಒಳ್ಳೆಯ ಯೋಜನೆ. ಆದರೆ ಪ್ರೀಮಿಯಂ ಮೊತ್ತ ಹೆಚ್ಚಾಗಿದೆ. ಈ ಕುರಿತು ಜುಲೈ 8ರಂದು ಸಹಕಾರಿ ಬ್ಯಾಂಕ್ ಹಾಗೂ ವಿಮಾ ಕಂಪೆನಿಗಳ ಸಭೆ ಕರೆಯಲಾಗಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.
ಸುಳ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಸಲ್‌ಬಿಮಾ ಯೋಜನೆಯಡಿ ಅಡಿಕೆಯನ್ನೂ ಸೇರಿಸಲಾಗಿದೆ. ಕೊಳೆರೋಗವನ್ನೂ ಸೇರ್ಪಡೆ ಮಾಡುವ ಪ್ರಯತ್ನ ಮಾಡಲಾಗುವುದು. ಪಕ್ಷದ ಕಾರ್ಯಾಕಾರಿಣಿಯಲ್ಲಿ ಈ ಕುರಿತು ಚರ್ಚೆ ನಡೆದಿದೆ. ಸರಿಪಡಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದರು.