×
Ad

ಆಲಂಕಾರು: ಕಾಂಗ್ರೆಸ್ ಸದಸ್ಯರಿಂದ ಪಕ್ಷಕ್ಕೆ ಸಾಮೂಹಿಕ ರಾಜಿನಾಮೆ

Update: 2016-07-05 18:53 IST

ಕಡಬ, ಜು.5: ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿ ಸದಸ್ಯರ ಆಯ್ಕೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಆಲಂಕಾರು ಕಾಂಗ್ರೆಸ್ ಗ್ರಾಮ ಸಮಿತಿಯ ಎಲ್ಲಾ ಸದಸ್ಯರು ಕಡಬ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ವಿಜಯ ಕುಮಾರ್ ರೈಯವರಿಗೆ ಸಾಮೂಹಿಕ ರಾಜಿನಾಮೆ ಸಲ್ಲಿಸಿದ್ದಾರೆ.

ರಾಜಿನಾಮೆ ನೀಡಿದ ಬಗ್ಗೆ ಆಲಂಕಾರು ಕಾಂಗ್ರೆಸ್ ಗ್ರಾಮ ಸಮಿತಿ ಸಂಚಾಲಕ ಗೋಪಾಕೃಷ್ಣ ಪಡ್ಡಿಲ್ಲಾಯ ಮಾತನಾಡಿ, ಕಡಬ ಬ್ಲಾಕ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಪಿ.ಪಿ ವರ್ಗೀಸ್ ಶರವೂರು ದೇವಾಲಯದ ವ್ಯವಸ್ಥಾಪನಾ ಸಮಿತಿ ಆಯ್ಕೆಯಲ್ಲಿ ಬಹಳಷ್ಟು ತಪ್ಪುಗಳನ್ನು ಎಸಗಿದ್ದಾರೆ. ನೂತನ ಆಯ್ಕೆ ಸಮಿತಿಯಲ್ಲಿ ಆಲಂಕಾರಿನ ಜನತೆಯನ್ನು ಕಡೆಗಣಿಸಿ ಕೇವಲ ಮೂರು ಜನರಿಗೆ ಮಾತ್ರ ಅವಕಾಶ ನೀಡುವಂತೆ ಮಾಡಿ ಬೇರೆ ಗ್ರಾಮದ ಸದಸ್ಯರಿಗೆ ಹೆಚ್ಚು ಮಾನ್ಯತೆ ನೀಡಿದ್ದಾರೆ. ಈ ಮೂರು ಜನ ಆಯ್ಕೆಯಾದವರಲ್ಲಿ ಈಗಾಗಲೇ ಸುಬ್ರಹಣ್ಯ ರಾವ್ ಹಾಗೂ ಮೋಹಿನಿ ನಾರಾಯಣ ಮೂಲ್ಯ ವ್ಯವಸ್ಥಾಪನಾ ಸಮಿತಿಗೆ ರಾಜಿನಾಮೆ ನೀಡಿರುತ್ತಾರೆ. ಈ ಎಲ್ಲಾ ಬೆಳವಣಿಗೆಯಿಂದ ಬೇಸತ್ತು ಮತ್ತು ಪಕ್ಷದ ಹಿರಿಯ ಜವಾಬ್ದಾರಿಯುತ ವ್ಯಕ್ತಿಗಳ ಧೋರಣೆಯಿಂದ ಬೇಸತ್ತು 100ಕ್ಕೂ ಅಧಿಕ ಕಾಂಗ್ರೆಸ್ ಗ್ರಾಮ ಸಮಿತಿಯ ಸದಸ್ಯರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆಯನ್ನು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಪಕ್ಷದ ಯಾವುದೇ ಕಾರ್ಯಚಟುವಟಿಕೆ ಹಾಗೂ ಜವಾಬ್ದಾರಿಯಲ್ಲೂ ಮುಂದುವರಿಯುವುದಿಲ್ಲ ಎಂದು ತಿಳಿಸಿದರು.

ಆಲಂಕಾರು ಕಾಂಗ್ರೆಸ್ ಗ್ರಾಮ ಸಮಿತಿ ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಮತ್ತು ಪ್ರಧಾನ ಕಾರ್ಯದರ್ಶಿ ಕೇಶವ ದೇವಾಡಿಗ ಮಾತನಾಡಿ ಮೆಸ್ಕಾಂ ಗ್ರಾಹಕ ಸಮಿತಿ ಸದಸ್ಯನಾಗಿ ಸೇವೆ ಸಲ್ಲಿಸುತ್ತಿದ್ದೆವು. ಈ ಜವಾಬ್ದಾರಿಗೂ ನಾವು ರಾಜೀನಾಮೆ ನೀಡಿರುತ್ತೇವೆ ಎಂದು ಘೋಷಿಸಿದರು. ಈ ರಾಜಿನಾಮೆ ಪತ್ರವನ್ನು ಜಿಲ್ಲಾಧ್ಯಕ್ಷರಿಗೆ ನೀಡುವುದಾಗಿ ತಿಳಿಸಿದರು.

ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ನಿಯೋಜಿತ ಅಧ್ಯಕ್ಷ ಗುರುಪ್ರಸಾದ್ ಅಲೆಕ್ಕಿ, ಆಲಂಕಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ನಗ್ರಿ , ಯಾದವೇಂದ್ರ ಪೂಜಾರಿ ಕಯರ್‌ಮೂಲೆ ಮೊದಲಾದವರ ಜೊತೆ 100ಕ್ಕೂ ಅಧಿಕ ಸದಸ್ಯರು ರಾಜಿನಾಮೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News