×
Ad

ಕೇಂದ್ರ ಸಂಪುಟ ಪುನಾರಚನೆ ಗೋಯಲ್, ಅಕ್ಬರ್, ಜಿಗಜಿಣಗಿ ಸಹಿತ 19 ಮಂದಿ ಸೇರ್ಪಡೆ

Update: 2016-07-05 19:38 IST

ಹೊಸದಿಲ್ಲಿ,ಜು.5: ಬಹುನಿರೀಕ್ಷಿತ ಕೇಂದ್ರ ಸಂಪುಟ ಪುನಾರಚನೆ ಮಂಗಳವಾರ ನಡೆದಿದ್ದು, ಬಿಜೆಪಿ ನಾಯಕರಾದ ಎಸ್.ಎಸ್.ಅಹ್ಲುವಾಲಿಯಾ, ಎಂ.ಜಿ. ಅಕ್ಬರ್, ರಾಜ್ಯದ ಸಂಸದ ರಮೇಶ್‌ಜಿಗಜಿಣಗಿ ಸೇರಿದಂತೆ 19 ಮಂದಿ ಸೇರ್ಪಡೆಗೊಂಡಿದ್ದಾರೆ. ಜಲಸಂಪನ್ಮೂಲ ಸಚಿವ ಸನ್ವಾರ್‌ಲಾಲ್ ಜಾಟ್, ಪಂಚಾಯತ್ ರಾಜ್‌ಸಚಿವ ನಿಹಾಲ್‌ಚಂದ್ ಹಾಗೂ ಕೃಷಿ ಸಚಿವ ಮೋಹನ್‌ಭಾಯ್ ಕುಂದರಿಯಾ ಸೇರಿದಂತೆ ಐವರನ್ನು ಸಂಪುಟದಿಂದ ಕೈಬಿಡಲಾಗಿದೆ. ಎನ್‌ಡಿಎ ಒಕ್ಕೂಟದ ಜೊತೆಗಾರ ಪಕ್ಷಗಳ ಪೈಕಿ ಅಪ್ನಾದಳ್‌ನ ಅನುಪ್ರಿಯಾ ಪಟೇಲ್ ಹಾಗೂ ಆರ್‌ಪಿಐನ ರಾಮ್‌ದಾಸ್‌ಅಠವಳೆಗೆ ಸಂಪುಟದಲ್ಲಿ ಸ್ಥಾನ ದೊರೆತಿದೆ. ಬಿಜೆಪಿಯ ಹಿರಿಯ ನಾಯಕರಾದ ವಿಜಯ್ ಗೋಯೆಲ್ ಹಾಗೂ ಫಗನ್ ಕುಲಾಸ್ತೆ ಕೂಡಾ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್,ಕ್ಯಾಬಿನೆಟ್‌ದರ್ಜೆಗೆ ಭಡ್ತಿ ಪಡೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 2014ರ ಮೇ ತಿಂಗಳಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಅವರು ನಡೆಸಿದ ದ್ವಿತೀಯ ಸಂಪುಟ ಪುನಾರಚನೆ ಇದಾಗಿದೆ.ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶ ಹಾಗೂ ಉತ್ತರಖಂಡ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನೂತನ ಸಂಪುಟದಲ್ಲಿ ದಲಿತ ಹಾಗೂ ಒಬಿಸಿ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
 
 ಪರಿಸರ ಖಾತೆಯ ಸಹಾಯಕ ಸಚಿವರಾಗಿ ಸ್ವತಂತ್ರ ನಿರ್ವಹಣೆ ಹೊಂದಿದ್ದ ಪ್ರಕಾಶ್ ಜಾವ್ಡೇಕರ್ ಪುನಾರಚನೆಗೊಂಡ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಗೇರಿದ ಏಕೈಕ ಸಚಿವರಾಗಿದ್ದಾರೆ. ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ನೂತನ ಸಚಿವರೆಲ್ಲರೂ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಂದ ಪ್ರಮಾಣವಚನ ಸ್ವೀಕರಿಸಿದರು. ಅಜಯ್ ತಮ್ತಾ (ಉತ್ತರಖಂಡ), ಅರ್ಜುನ್ ರಾಮ್ ಮೇಘವಾಲ್ (ರಾಜಸ್ಥಾನ), ಕೃಷ್ಣರಾಜ್ (ಉ.ಪ್ರ.), ಅಠವಳೆ (ಮಹಾರಾಷ್ಟ್ರ), ರಮೇಶ್ ಜಿಗಜಿಣಗಿ (ಕರ್ನಾಟಕ) ನೂತನ ಸಂಪುಟಕ್ಕೆ ಸೇರ್ಪಡೆಗೊಂಡ ದಲಿತ ಸಂಸದರಾಗಿದ್ದಾರೆ.ನೂತನ ಸಚಿವರ ಪೈಕಿ ವಿಜಯ್ ಗೋಯಲ್ ಹಿರಿಯ ರಾಜ್ಯಸಭಾ ಸದಸ್ಯರಾಗಿದ್ದಾರೆ, ಎಂ.ಜೆ. ಅಕ್ಬರ್ ಇತ್ತೀಚೆಗಷ್ಟೇ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
 ಪಿ.ಪಿ.ಚೌಧುರಿ, ಸಿ.ಆರ್.ಚೌಧುರಿ (ರಾಜಸ್ಥಾನ), ಎ.ಎಂ. ದವೆ, ಫಗನ್‌ಸಿಂಗ್ ಕುಲಸ್ತೆ (ಮಧ್ಯಪ್ರದೇಶ), ಮಹೇಂದ್ರ ನಾಥ ಪಾಂಡೆ (ಉ.ಪ್ರ.), ಪುರುಷೋತ್ತಮ್ ರೂಪಾಲಾ, ಜೆ.ಭಾಭೋರ್, ಅನುಪ್ರಿಯಾ ಪಟೇಲ್, ಮನ್‌ಸುಖ್‌ಭಾಯ್ ಮಾಂಡವೀಯ (ಗುಜರಾತ್), ರಾಜೆನ್ ಗೊಹೆನ್ (ಅಸ್ಸಾಮ್) ಹಾಗೂ ಎಸ್.ಆರ್.ಭಾಮ್ರೆ (ಮಹಾರಾಷ್ಟ್ರ) ಮೋದಿ ಸಂಪುಟಕ್ಕೆ ಸೇರ್ಪಡೆಗೊಂಡ ಇತರರು.
 ಸಂಪುಟದಿಂದ ಕೈಬಿಡಲಾದ ಐವರು ಸಚಿವರೆಂದರೆ, ನಿಹಾಲ್‌ಚಂದ್, ರಾಮ್ ಶಂಕರ್ ಕಠೇರಿಯಾ, ಸನ್ವರ್‌ಲಾಲ್ ಜಾಟ್, ಮನ್‌ಸುಖ್‌ಭಾಯ್ ಡಿ. ವಸವಾ ಹಾಊಗ ಎಂ.ಕೆ. ಕುಂದರಿಯಾ. ಇವರೆಲ್ಲರೂ ಸಹಾಯಕ ಸಚಿವರಾಗಿದ್ದರು.
ವಿಜಯ್ ಗೋಯೆಲ್ ಹಾಗೂ ಫಗನ್‌ಕುಲಾಸ್ತೆ ಅವರನ್ನು ಹೊರತುಪಡಿಸಿ, ಉಳಿದವರೆಲ್ಲರೂ ಸಂಸತ್‌ನ ಹೊಸಮುಖಗಳಾಗಿದ್ದಾರೆ. ಇವರಲ್ಲಿ ಕೆಲವರು ಬಿಜೆಪಿ ಆಡಳಿತದ ರಾಜ್ಯ ಸರಕಾರಗಳಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು. ಇಂದು ಸಂಪುಟಕ್ಕೆ ಸೇರ್ಪಡೆಗೊಂಡವರಲ್ಲಿ ಪೈಕಿ ಅನುಪ್ರಿಯ ಪಟೇಲ್ ಅತ್ಯಂತ ಕಿರಿಯವಯಸ್ಸಿನ ಸಂಸದೆಯಾಗಿದ್ದಾರೆ.
  ಐವರು ಸಚಿವರ ಕೈಬಿಟ್ಟು, 19 ಮಂದಿಯ ಸೇರ್ಪಡೆಯೊಂದಿಗೆ ಮೋದಿ ಸಂಪುಟದ ಬಲ 78ಕ್ಕೇರಿದ್ದು, ಸಂಪುಟದ ಗಾತ್ರಕ್ಕೆ ವಿಧಿಸಲಾದ ಸಾಂವಿಧಾನಿಕ ಮಿತಿಗಿಂತ ಕೇವಲ ನಾಲ್ಕು ಸ್ಥಾನಗಳಷ್ಟೇ ಕಡಿಮೆಯಿದೆ.
  ಸರಕಾರಕ್ಕೆ ಅನುಭವ, ನೈಪುಣ್ಯತೆ ಹಾಗೂ ಶಕ್ತಿಯನ್ನು ತುಂಬುವ ಉದ್ದೇಶದಿಂದ ಸಂಪುಟವನ್ನು ಪುನಾರಚಿಸಲಾಗಿದೆಯೆಂದು ಕೇಂದ್ರ ಸಂಪುಟದ ಮೂಲಗಳು ತಿಳಿಸಿವೆ. ದಲಿತರು ಹಾಗೂ ಓಬಿಸಿಗಳಲ್ಲಿ ಪಕ್ಷ ನೆಲೆಯನ್ನು ವಿಸ್ತರಿಸುವ ಉದ್ದೇಶದಿಂದ ಆ ಸಮುದಾಯಗಳಿಗೆ ನೂತನ ಸಂಪುಟದಲ್ಲಿ ಪ್ರಾಶಸ್ತ್ಯ ನೀಡಲಾಗಿದೆಯೆಂದು ಬಿಜೆಪಿ ಮೂಲಗಳು ತಿಳಿಸಿವೆ. ಮುಂದಿನ ವರ್ಷ ಚುನಾವಣೆಗೆ ತೆರಳಲಿರುವ ರಾಜ್ಯಗಳಿಗೂ ಈ ಸಂಪುಟದಲ್ಲಿ ಸಾಕಷ್ಟು ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆಯೆಂದು ಅವು ತಿಳಿಸಿವೆ.


ನೂತನ ಸಚಿವರು
ಫಗನ್ ಸಿಂಗ್ ಕುಲಾಸ್ತೆ, ಎಸ್.ಎಸ್.ಅಹ್ಲುವಾಲಿಯಾ, ರಮೇಶ್ ಚಂದಪ್ಪ ಜಿಗಜಿಣಗಿ, ವಿಜಯ್ ಗೋಯಲ್, ರಾಮ್‌ದಾಸ್ ಅಠವಳೆ,ರಾಜೆನ್ ಗೊಹೆನ್, ಅನಿಲ್ ಮಾಧವ್ ಧವೆ, ಪುರುಷೋತ್ತಮ್ ರೂಪಾಲ,ಎಂ.ಜೆ. ಅಕ್ಬರ್, ಅರ್ಜುನ್ ರಾಮ್ ಮೇಘವಾಲ್, ಜಸ್ವಂತ್‌ಸಿಂಗ್ ಬಾಭೋಹರ್, ಮಹೇಂದ್ರನಾಥ್ ಪಾಂಡೆ, ಅಜಯ್ ತಾಮ್ತಾ,ಕೃಷ್ಣರಾಜ್, ಮನುಸುಖ್‌ಬಾಯ್ ಮಾಂಡವೀಯ, ಅನುಪ್ರಿಯಾ ಪಟೇಲ್, ಸಿ.ಆರ್.ಚೌಧರಿ, ಪಿ.ಪಿ.ಚೌಧರಿ ಹಾಗೂ ಸುಭಾಷ್ ರಾಮ್ ಬಾಮ್ರೆ.

ಕೈಬಿಟ್ಟವರೆಲ್ಲರೂ ಸಹಾಯಕ ಸಚಿವರು
 
ಹೊಸದಿಲ್ಲಿ, ಜು.5: ನೂತನವಾಗಿ ಪುನಾರಚನೆಯಾದ ಮೋದಿ ಸಂಪುಟದಿಂದ ಕೈಬಿಡಲಾದ ಎಲ್ಲಾ ಐದು ಮಂದಿ ಸಹಾಯಕ ದರ್ಜೆಯ ಸಚಿವರಾಗಿದ್ದಾರೆ. ಸನ್ವಾರ್‌ಲಾಲ್ ಜಾಟ್ (ಜಲಸಂಪನ್ಮೂಲ), ನಿಹಾಲ್‌ಚಂದ್ (ಪಂಚಾಯತ್ ರಾಜ್), ರಾಮ್‌ಶಂಕರ್ ಕಥೇರಿಯಾ (ಎಚ್‌ಆರ್‌ಡಿ), ಮನ್‌ಸುಖ್ ಭಾಯ್ ವಸವಾ (ಬುಡಕಟ್ಟು ವ್ಯವಹಾರ) ಹಾಗೂ ಮೋಹನ್‌ಭಾಯ್ ಕುಂದರಿಯಾ (ಕೃಷಿ), ಸಂಪುಟದಿಂದ ಕೈಬಿಡಲಾದ ಸಚಿವರಾಗಿದ್ದಾರೆ.
 19 ಮಂದಿ ನೂತನ ಸಚಿವರ ಸೇರ್ಪಡೆೆ ಹಾಗೂ ಐವರು ಸಹಾಯಕ ಸಚಿವರ ನಿರ್ಗಮನದಿಂದಾಗಿ, ಪ್ರಧಾನಿ ಸಹಿತ ಕೇಂದ್ರ ಸಂಪುಟದ ಬಲವು 78ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News