×
Ad

ಪುತ್ತೂರು: ಇರ್ತಲೆ ಹಾವು ಮಾರಾಟಕ್ಕೆ ಯತ್ನಿಸಿದ ನಾಲ್ವರ ಬಂಧನ

Update: 2016-07-05 20:09 IST

ಪುತ್ತೂರು ಜು.5: ಪುತ್ತೂರು ನಗರ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಪುತ್ತೂರು ನಗರದ ಹೊರವಲಯದ ನರಿಮೊಗ್ರು ಗ್ರಾಮದ ಪುರುಷರ ಕಟ್ಟೆ ಎಂಬಲ್ಲಿ ಸೋಮವಾರ ಸಂಜೆ ಕಾರ್ಯಾಚರಣೆ ನಡೆಸಿ ಇರ್ತಲೆ (ಎರಡು ತಲೆಯ) ಹಾವು ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವೊಂದನ್ನು ಪತ್ತೆ ಮಾಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇರ್ತಲೆ ಹಾವು, ಮಾರಾಟಗಾರರು ಸಾಗಾಟಕ್ಕೆ ಬಳಸಿದ್ದ ಇಂಡಿಕಾ ಕಾರು ಮತ್ತು ಆರೋಪಿಗಳಲ್ಲಿದ್ದ ಮೊಬೈಲ್ ಪೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಮಧುಗಿರಿಯ ಎಂ.ಎನ್.ಶಶಿಧರ್ (29), ಕುಣಿಗಲ್‌ನ ಎನ್. ರತನ್ ಗೌಡ (26) , ಪುತ್ತೂರು ತಾಲ್ಲೂಕಿನ ರಾಮಕುಂಜ ಗ್ರಾಮದ ಆತೂರಿನ ಸಲೀಂ.ಸಿ.ಕೆ(26) ಮತ್ತು ವಾಹನ ಚಾಲಕ ಮಡಿಕೇರಿಯ ಗಗನ್ ಎಂ.ಬಿ (30) ಬಂಧಿತ ಆರೋಪಿಗಳು. ಸೋಮವಾರ ಪುತ್ತೂರು ನಗರ ಠಾಣೆಯ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಅವರಿಗೆ ಬಂದ ಖಚಿತ ಮಾಹಿತಿಯ ಹಿನ್ನಲೆಯಲ್ಲಿ ಪೊಲೀಸರು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

ಎಎಸ್ಪಿ ರಿಷ್ಯಂತ್ ಅವರ ಮಾರ್ಗದರ್ಶನದಲ್ಲಿ ಪುತ್ತೂರು ನಗರ ಠಾಣೆಯ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಎಸೈ ಅಬ್ದುಲ್ ಖಾದರ್, ಹೆಡ್‌ಕಾನ್‌ಸ್ಟೇಬಲ್‌ಗಳಾದ ಸ್ಕರಿಯಾ, ಕೃಷ್ಣಪ್ಪ, ದಾಮೋದರ್, ಕಾನ್‌ಸ್ಟೇಬಲ್‌ಗಳಾದ ಪ್ರಶಾಂತ್ ಶೆಟ್ಟಿ, ಪ್ರಶಾಂತ್ ರೈ, ಹರೀಶ್ ಮತ್ತು ಚಾಲಕರಾದ ಲಿಂಗಪ್ಪ ಗೌಡ ಮತ್ತು ಮೋಹನ್ ಕಾರ್ಯಾಚರಣೆ ನಡೆಸಿದ್ದರು.

ಕುಣಿಗಲ್‌ನ ರತನ್ ಎಂಬಾತನಿಗೆ ಊರಿನ ಹೊಲದಲ್ಲಿ ವ್ಯವಸಾಯ ಮಾಡುತ್ತಿದ್ದ ಸಂದರ್ಭದಲ್ಲಿ ಇರ್ತಲೆ ಹಾವು ಸಿಕ್ಕಿತ್ತು. ಈ ಮಾಹಿತಿಯನ್ನು ಆತ ತನ್ನ ಸ್ನೇಹಿತರಾದ ಶಶಿಧರ್ ಮತ್ತು ಸಲೀಂ ಅವರಿಗೆ ತಿಳಿಸಿದ್ದ. ದಕ್ಷಿಣ ಕನ್ನಡ, ಶಿವಮೊಗ್ಗ , ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇರ್ತಲೆ ಹಾವಿಗೆ ಲಕ್ಷಾಂತರ ರೂ.ಸಿಗುತ್ತದೆ ಎಂದು ಆರೋಪಿಗಳ ಪೈಕಿ ಸಲೀಂ ತಿಳಿಸಿದ್ದ ಹಿನ್ನೆಲೆಯಲ್ಲಿ ಈ ಮೂವರು ಗಗನ್ ಎಂಬಾತನ ಇಂಡಿಕಾ ಕಾರಿನಲ್ಲಿ ಇರ್ತಲೆ ಹಾವನ್ನು ಮಾರಾಟ ಮಾಡಲು ಸುಳ್ಯ ತಾಲೂಕಿನ ಪಂಜಕ್ಕೆ ಎರಡು ದಿನಗಳ ಹಿಂದೆ ತಂದಿದ್ದರು. ಅಲ್ಲಿ ಮಾರಾಟ ಮಾಡಲೆತ್ನಿಸಿದ ಆರೋಪಿಗಳು ಅಲ್ಲಿ ಮಾರಾಟ ಮಾಡಲು ಸಾಧ್ಯವಾಗದೆ ಸೋಮವಾರ ಸಂಜೆ ಪುತ್ತೂರು ತಾಲೂಕಿನ ನರಿಮೊಗ್ರು ಗ್ರಾಮದ ಪುರುಷರ ಕಟ್ಟೆಗೆ ಬಂದು ಮಾರಾಟ ಮಾಡುವ ಯತ್ನದಲ್ಲಿದ್ದಾಗಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ಪುತ್ತೂರು ಎಎಸ್ಪಿ ರಿಷ್ಯಂತ್ ಮಂಗಳವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಆರೋಪಿಗಳು ದಿಢೀರ್ ಹಣಗಳಿಸುವ ಇರಾದೆಯಿಂದ ಇರ್ತಲೆ ಹಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಆರೋಪಿಗಳು ಈ ಹಾವಿಗೆ ರೂ.2 ಲಕ್ಷದಿಂದ ರೂ.3 ಲಕ್ಷದ ತನಕ ಬೇಡಿಕೆ ಇಟ್ಟಿದ್ದರು ಎಂಬ ವಿಚಾರ ತನಿಖೆಯಿಂದ ತಿಳಿದು ಬಂದಿದೆ . ಆರೋಪಿಗಳ ಪೈಕಿ ಗಗನ್ ಎಂಬಾತ ಖಾಸಗಿ ಕಂಪೆನಿಯೊಂದರಲ್ಲಿ ವಾಹನ ಚಾಲಕನಾಗಿದ್ದು, ದುಪ್ಪಟ್ಟು ಬಾಡಿಗೆಯ ಆಸೆಯಿಂದ ಉಳಿದ ಆರೋಪಿಗಳ ಜೊತೆ ಸೇರಿಕೊಂಡು ಈ ಹಾವಿನ ಮಾರಾಟದಲ್ಲಿ ಶಾಮೀಲಾಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅವರು ಮಾಹಿತಿ ನೀಡಿದರು.

ವಶಪಡಿಸಿಕೊಂಡಿರುವ ಹಾವಿನ ಪ್ರಭೇದದ ಮಾರಾಟವನ್ನು ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಂತೆ ನಿಷೇಧಿಸಲಾಗಿದ್ದು, ಮರಳು ಹಾವು (ಸ್ಯಾಂಡ್ ಬೋವ) ಎಂಬ ಹೆಸರಿನ ಈ ಇರ್ತಲೆ ಹಾವು ವಿಷರಹಿತವಾಗಿದೆ. ಈ ಹಾವನ್ನು ಮನೆಯಲ್ಲಿ ಇರಿಸಿಕೊಂಡರೆ ಸಂಪತ್ತು ವೃದ್ಧಿಸುತ್ತದೆ ಎಂಬ ಮೂಢನಂಬಿಕೆಯಿಂದ ಈ ಹಾವನ್ನು ಹಿಡಿದು ವ್ಯವಹಾರ ಮಾಡಲಾಗುತ್ತಿದೆ. ಮೂಢನಂಬಿಕೆಯ ಆಧಾರದಲ್ಲಿ ಈ ಹಾವನ್ನು ಹಿಡಿದು ಜನರನ್ನು ಮೋಸ ಮಾಡುವ ಜಾಲಗಳು ಸಕ್ರೀಯವಾಗಿವೆ ಎಂದು ಎಎಸ್ಪಿ ರಿಷ್ಯಂತ್ ತಿಳಿಸಿದರು.

ವನ್ಯಜೀವಿ ಕಾಯ್ದೆಯಡಿ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡು ಮಂಗಳವಾರ ಸಂಜೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ವಶಪಡಿಸಿಕೊಂಡ ಇರ್ತಲೆ ಹಾವನ್ನು ಪಿಲಿಕುಳ ನಿಸರ್ಗಧಾಮಕ್ಕೆ ನೀಡಲಾಗುವುದು ಎಂದು ಅವರು ತಿಳಿಸಿದರು. ಆರೋಪಿಗಳು ಇರ್ತಲೆ ಹಾವಿನ ಸಾಗಾಟಕ್ಕೆ ಬಳಸಿದ ಕಾರಿನ ವೌಲ್ಯ 4 ಲಕ್ಷ ರೂ. ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News