" ನಾನು ಪ್ರತಿಕೂಲ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದೆ " : ಪದಚ್ಯುತ ಬುಡಕಟ್ಟು ಸಮುದಾಯದ ಸಚಿವ ವಸವ
ಹೊಸದಿಲ್ಲಿ,ಜು.5: ಕೇಂದ್ರ ಸಂಪುಟದಿಂದ ತನ್ನನ್ನು ಕೈಬಿಟ್ಟಿರುವುದಕ್ಕೆ ಕಾರಣವೇನೆಂಬ ಬಗ್ಗೆ ತನಗೆ ತಿಳಿದಿಲ್ಲವೆಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಮನ್‌ಸುಖ್‌ಭಾಯ್ ವಸವಾ ಹೇಳಿದ್ದಾರೆ. ಆದರೆ ಸಂಪುಟದಲ್ಲಿ ತಾನು ಪ್ರತಿಕೂಲ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದುದಾಗಿ ಅವರು ಹೇಳಿದ್ದಾರೆ.
ಗುಜರಾತ್‌ನಲ್ಲಿ ಬುಡಕಟ್ಟು ಜನರ ಕಲ್ಯಾಣಕ್ಕೆ ಸಂಬಂಧಿಸಿದ ದೂರುಗಳಿಗೆ ಸ್ಪಂದಿಸದೆ ಇದ್ದಲ್ಲಿ ಕೇಂದ್ರ ಸಚಿವ ಹುದ್ದೆಯನ್ನು ತ್ಯಜಿಸುವುದಾಗಿ ತಾನು ಮೂರು ತಿಂಗಳುಗಳ ಹಿಂದೆ ಗುಜರಾತ್ ಮುಖ್ಯಮಂತ್ರಿ ಅನಂದಿಬೆನ್ ಪಟೇಲ್‌ಗೆ ಪತ್ರ ಬರೆದಿರುವುದಾಗಿ ವಸವಾ ಇಂದು ಬಹಿರಂಗಪಡಿಸಿದ್ದಾರೆ.
‘‘ ಸಂಪುಟದಿಂದ ಹೊರಹೋಗುವಂತೆ ನನಗೆ ಯಾಕೆ ಹೇಳಲಾಯಿತೆಂದು ತಿಳಿಯುತ್ತಿಲ್ಲ. ಈ ಬಗ್ಗೆ ನಾನು ಪಕ್ಷದ ಹೈಕಮಾಂಡ್‌ನಿಂದ ಸ್ಪಷ್ಟನೆ ಕೇಳಲಿದ್ದೇನೆ. ಬುಡಕಟ್ಟು ಸಚಿವನಾಗಿ ನಾನು ಬುಡಕಟ್ಟು ಸಮುದಾಯ ಹಾಗೂ ಪ್ರಾಂತಗಳ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಸಾಕಷ್ಟು ಶ್ರಮಿಸಿದ್ದೇನೆ ಎಂದು ವಸವಾ ತಿಳಿಸಿದ್ದಾರೆ.
ಮಧ್ಯ ಗುಜರಾತ್‌ನ ಭರೂಚ್ ಲೋಕಸಭಾ ಕ್ಷೇತ್ರದ ಸಂಸದರಾದ ವಸವಾ, ಬುಡಕಟ್ಟು ವ್ಯವಹಾರಗಳ ಸಹಾಯಕ ಖಾತೆಯನ್ನು ಹೊಂದಿದ್ದರು.
ಆದರೆ ನಾನು ನನ್ನ ಸಚಿವಾಲಯದಲ್ಲೇ ಪ್ರತಿಕೂಲ ಪರಿಸ್ಥಿತಿಯಲ್ಲಿ ಕೆಲಸ ಮಾಡಬೇಕಾಗಿತ್ತು ಎಂದವರು ಹೇಳಿದ್ದಾರೆ. ಇಂದು ನಡೆದ ಸಂಪುಟ ವಿಸ್ತರಣೆಯಲ್ಲಿ ವಸವಾ ಅವರನ್ನು ಕೈಬಿಟ್ಟು ಮೋದಿ, ಅವರ ಸ್ಥಾನದಲ್ಲಿ ಗುಜರಾತ್‌ನ ಇನ್ನೋರ್ವ ಪ್ರಮುಖ ಬುಡಕಟ್ಟು ನಾಯಕ ಜಸ್ವಂತ್‌ಸಿನ್ಹಾ ಅಭೋಹಾರ್ ಅವರನ್ನು ಸೇರ್ಪಡೆಗೊಳಿಸಿದ್ದಾರೆ.
‘ನನ್ನ ‘ಸಚಿವಾಲಯದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರಲು ತಾನು ಬಯಸಿದ್ದೆ. ಆದರೆ ನನ್ನ ಪ್ರಯತ್ನಕ್ಕೆ ಯಾವುದೇ ಬೆಂಬಲ ದೊರೆಯಲಿಲ್ಲವೆಂದು ಅವರು ತಿಳಿಸಿದ್ದಾರೆ. ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರಕಾರದ ಆರ್ಥಿಕ ನೆರವಿನೊಂದಿಗೆ ರಾಜ್ಯ ಸರಕಾರಗಳು ನಡೆಸುವ ವಿಏಕಲವ್ಯ ಮಾದರಿ ವಸತಿ ಶಾಲೆಗಳ ದಯನೀಯ ಸ್ಥಿತಿಯು ತನಗೆ ಅಸಮಾಧಾನವುಂಟು ಮಾಡಿ’’ೆಯೆಂದು ಅವರು ತಿಳಿಸಿದ್ದಾರೆ.
‘‘ಗುಜರಾತ್‌ನಲ್ಲಿ ಶಾಲಾ ಶಿಕ್ಷಣವು ಅದರಲ್ಲೂ ವಿಶೇಷವಾಗಿ ಬುಡಕಟ್ಟು ಪ್ರದೇಶಗಳಲ್ಲಿ ಅತ್ಯಂತ ಶೋಚನೀಯವಾಗಿದೆ. ಮಕ್ಕಳಿಗೆ ಯೋಗ್ಯ ಶಿಕ್ಷಣವು ದೊರೆಯುತ್ತಿಲ್ಲ. ಅಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಶಿಕ್ಷಕರಿದ್ದಾರೆ. ಗಣಿತ, ವಿಜ್ಞಾನ ಹಾಗೂ ಇಂಗೀಷ್ ಪಠ್ಯಗಳು, ಹಲವು ಶಾಲೆಗಳಲ್ಲಿ ನಾಪತ್ತೆಯಾಗಿವೆಯೆಂದು ಅವರು ಹೇಳಿದ್ದಾರೆ. ಬುಡಕಟ್ಟು ಜನರ ಅಭಿವೃದ್ಧಿಗೆ ಗುಜರಾತ್ ಸರಕಾರ ಏನನ್ನೂ ಮಾಡುತ್ತಿಲ್ಲ. ಬುಡಕಟ್ಟು ಸಚಿವನಾಗಿ ನಾನು ಇದನ್ನು ಒಪ್ಪಲಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ರಾಜೀನಾಮೆ ನೀಡುವುದಾಗಿ ತಾನು ಮುಖ್ಯಮಂತ್ರಿ ಅನಂದಿಬೆನ್ ಅವರಿಗೆ ಮೂರು ತಿಂಗಳ ಹಿಂದೆ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ. ಆದರೆ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲವೆಂದು ವಸನಾ ತಿಳಿಸಿದ್ದಾರೆ.
ತನ್ನ ಸಚಿವಾಲಯದಲ್ಲಿ ತಾನು ಅತ್ಯಂತ ಪ್ರತಿಕೂಲಕರ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದೆ. ಸಚಿವಾಲಯದ ಅಧೀನಕಾರ್ಯದರ್ಶಿ ಆರ್.ಕೆ. ಅಗರವಾಲ್, ತನಗೆ ಮಾಹಿತಿ ನೀಡದೆಯೇ ಸದಾ ಕಾಲ ಜಮ್ಮುಕಾಶ್ಮೀರ ಹಾಗೂ ರಾಜಸ್ಥಾನ ಪ್ರವಾಸದಲ್ಲಿ ನಿರತರಾಗುತ್ತಿದ್ದರು. ಈ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲವೆಂದವರು ಹೇಳಿದ್ದಾರೆ.