ಬಾಂಗ್ಲಾ ಭಯೋತ್ಪಾದಕ ದಾಳಿ :ಭದ್ರತಾ ಪಡೆಗಳು ಅಮಾಯಕ ಕೆಫೆ ನೌಕರನನ್ನು ಕೊಂದವೆ?
ಢಾಕಾ, ಜು. 5: ಭಯೋತ್ಪಾದಕರ ಆಕ್ರಮಣಕ್ಕೆ ಗುರಿಯಾಗಿದ್ದ ಢಾಕಾದ ಕೆಫೆಗೆ ನುಗ್ಗಿದ ವೇಳೆ ಭದ್ರತಾ ಪಡೆಗಳು ಅಮಾಯಕ ಸಿಬ್ಬಂದಿಯೋರ್ವನನ್ನು ಆಕಸ್ಮಿಕವಾಗಿ ಹತ್ಯೆ ಮಾಡಿವೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಬಾಂಗ್ಲಾದೇಶ ಪೊಲೀಸರು ಮಂಗಳವಾರ ಹೇಳಿದ್ದಾರೆ.
ದಾಳಿಯ ಬಳಿಕ ಪೊಲೀಸರು ಬಿಡುಗಡೆಗೊಳಿಸಿದ ಶಂಕಿತ ಭಯೋತ್ಪಾದಕರ ಚಿತ್ರಗಳನ್ನು ನೋಡಿದ ಬಳಿಕ, ಕೆಫೆಯಲ್ಲಿ ಪಿಜ್ಜಾ ಮತ್ತು ಪಾಸ್ಟ ತಯಾರಿಸುತ್ತಿದ್ದ ಸೈಫುಲ್ ಇಸ್ಲಾಮ್ ಚೌಕಿದಾರ್‌ರನ್ನು ಅವರ ಸಂಬಂಧಿಗಳು ಗುರುತಿಸಿದ್ದಾರೆ. ‘‘ಅವರನ್ನು ಆಕಸ್ಮಿಕವಾಗಿ ಹತ್ಯೆ ಮಾಡಲಾಗಿದೆ ಎಂದು ನಮಗನಿಸುತ್ತದೆ’’ ಎಂದು ಪೊಲೀಸ್ ಅಧಿಕಾರಿಯೋರ್ವರು ಹೇಳಿದರು. ‘‘ನಾವು ತನಿಖೆ ಮಾಡುತ್ತಿದ್ದೇವೆ’’ ಎಂದರು.
ಶನಿವಾರ ಬೆಳಗ್ಗೆ ಕೆಫೆಯೊಳಗೆ ನುಗ್ಗಿದ ಭದ್ರತಾ ಪಡೆಗಳು ಆರು ಮಂದಿಯನ್ನು ಗುಂಡಿಟ್ಟು ಕೊಂದಿದ್ದವು. ಆ ವೇಳೆಗೆ 20 ಒತ್ತೆಯಾಳುಗಳು ಹತ್ಯೆಯಾಗಿದ್ದರು. ಓರ್ವ ಶಂಕಿತ ಭಯೋತ್ಪಾದಕನನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ.
ಚೌಕಿದಾರ್ ಗರ್ಭಿಣಿ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.