×
Ad

ಮದೀನಾ ಮಸೀದಿ ದಾಳಿ: 4 ಭದ್ರತಾ ಸಿಬ್ಬಂದಿ ಸಾವು

Update: 2016-07-06 00:13 IST

ರಿಯಾದ್, ಜು. 5: ಇಸ್ಲಾಮ್‌ನ ಎರಡನೆ ಅತಿ ಪವಿತ್ರ ಸ್ಥಳ ಮದೀನಾದಲ್ಲಿರುವ ಪ್ರವಾದಿಯ ಮಸೀದಿಯಲ್ಲಿ ಸೋಮವಾರ ನಡೆದ ದಾಳಿಯಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಹತರಾಗಿದ್ದಾರೆ.

ಉಪವಾಸದ ತಿಂಗಳು ರಮಝಾನ್ ಮುಗಿದು ಮುಸ್ಲಿಮರು ಈದುಲ್ ಫಿತ್ರ್‌ಗೆ ಸಿದ್ಧತೆ ನಡೆಸುತ್ತಿರುವಂತೆಯೇ ಇಸ್ಲಾಮ್‌ನ ಆಧ್ಯಾತ್ಮಿಕ ಮನೆಯ ಮೇಲೆ ನಡೆದ ದಾಳಿ ಭಾರೀ ಆಘಾತ ಸೃಷ್ಟಿಸಿದೆ.

ಮದೀನಾದ ಮಸೀದಿಯ ಮೇಲಿನ ದಾಳಿ ಸೇರಿದಂತೆ ಸೌದಿ ಅರೇಬಿಯದಲ್ಲಿ ಸೋಮವಾರ ಒಟ್ಟು ಮೂರು ಸ್ಫೋಟಗಳು ಸಂಭವಿಸಿವೆ. ಈ ಸ್ಫೋಟಗಳ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ.

ಆದರೆ, ಪವಿತ್ರ ತಿಂಗಳಿನಲ್ಲಿ ದಾಳಿ ನಡೆಸುವಂತೆ ಐಸಿಸ್ ತನ್ನ ಬೆಂಬಲಿಗರನ್ನು ಒತ್ತಾಯಿಸಿದೆ. ಓರ್ಲಾಂಡೊ, ಬಾಂಗ್ಲಾದೇಶ, ಇಸ್ತಾಂಬುಲ್ ಮತ್ತು ಬಗ್ದಾದ್‌ಗಳಲ್ಲಿ ರಮಝಾನ್ ತಿಂಗಳಲ್ಲಿ ನಡೆದ ಗುಂಡು ಹಾರಾಟ ಮತ್ತು ಬಾಂಬ್ ಸ್ಫೋಟಗಳಿಗೆ ಐಸಿಸ್ ಹೊಣೆ ಹೊತ್ತುಕೊಂಡಿದೆ ಅಥವಾ ಅದರ ಮೇಲೆ ಹೊಣೆ ಹೊರಿಸಲಾಗಿದೆ.

ಮದೀನಾದ ಪ್ರವಾದಿಯ ಮಸೀದಿಯಲ್ಲಿ ಸೂರ್ಯಾಸ್ತದ ಪ್ರಾರ್ಥನೆಗಳು ನಡೆಯುತ್ತಿದ್ದಾಗ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ. ಈ ಮಸೀದಿಯಲ್ಲಿ ಪ್ರವಾದಿ ಮುಹಮ್ಮದರನ್ನು ಸಮಾಧಿ ಮಾಡಲಾಗಿದ್ದು, ಅಲ್ಲಿಗೆ ಪ್ರತೀವರ್ಷ ಲಕ್ಷಾಂತರ ಯಾತ್ರಿಕರು ಭೇಟಿ ನೀಡುತ್ತಿದ್ದಾರೆ.

ವಾಹನ ನಿಲುಗಡೆ ಸ್ಥಳದ ಮೂಲಕ ಪ್ರವಾದಿಯ ಮಸೀದಿಯ ಕಡೆಗೆ ಹೋಗುತ್ತಿದ್ದ ಓರ್ವ ವ್ಯಕ್ತಿಯ ಬಗ್ಗೆ ಭದ್ರತಾ ಸಿಬ್ಬಂದಿ ಸಂಶಯಗೊಂಡರು ಎಂದು ಸೌದಿಯ ಆಂತರಿಕ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ನಿಲ್ಲಿಸಲು ಯತ್ನಿಸಿದಾಗ ಆತ ತನ್ನ ಆತ್ಮಹತ್ಯಾ ಬೆಲ್ಟನ್ನು ಸ್ಫೋಟಿಸಿದ. ಆಗ ಆ ವ್ಯಕ್ತಿ ಮತ್ತು ನಾಲ್ವರು ಭದ್ರತಾ ಸಿಬ್ಬಂದಿ ಹತರಾದರು’’ ಎಂದು ಹೇಳಿಕೆ ತಿಳಿಸಿದೆ. ಐವರು ಭದ್ರತಾ ಸಿಬ್ಬಂದಿ ಗಾಯಗೊಂಡರು.

ಭಾರೀ ಆಕ್ರೋಶ

 ಮದೀನಾದ ಮೇಲೆ ನಡೆದ ದಾಳಿಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೈರೋದಲ್ಲಿರುವ ಇಸ್ಲಾಮ್‌ನ ಅತ್ಯುನ್ನತ ಪ್ರಾಧಿಕಾರ ಅಲ್-ಅಝರ್ ಈ ದಾಳಿಗಳನ್ನು ಖಂಡಿಸಿದೆ ಹಾಗೂ ದೇವರ ಮನೆಗಳು, ಅದರಲ್ಲೂ ವಿಶೇಷವಾಗಿ ಪ್ರವಾದಿಯ ಮಸೀದಿಯ ಪಾವಿತ್ರವನ್ನು ರಕ್ಷಿಸಬೇಕು ಎಂದು ಕರೆ ನೀಡಿದೆ.

ಸೌದಿ ಅರೇಬಿಯದ ಶೂರಾ ಕೌನ್ಸಿಲ್, ಹಿಂದೆಂದೂ ನಡೆದಿರದ ಬೀಭತ್ಸ ದಾಳಿ ಇದಾಗಿದೆ ಎಂದಿದೆ.

‘‘ತನ್ನ ಹೃದಯದಲ್ಲಿ ಒಂದು ಅಣುವಿನಷ್ಟಾದರೂ ನಂಬಿಕೆ ಹೊಂದಿರುವ ವ್ಯಕ್ತಿಯೊಬ್ಬ ಈ ಅಪರಾಧವನ್ನು ಮಾಡಲಾರ’’ ಎಂದು ಕೌನ್ಸಿಲ್‌ನ ಮುಖ್ಯಸ್ಥ ಅಬ್ದುಲ್ಲಾ ಅಲ್-ಶೇಕ್‌ಹೇಳಿದ್ದಾರೆ.

ಪ್ರಮುಖ ಶಿಯಾ ಸಮುದಾಯವಾಗಿರುವ ಇರಾನ್ ಈ ದಾಳಿಯನ್ನು ಖಂಡಿಸಿದೆ ಹಾಗೂ ಭಯೋತ್ಪಾದಕರ ವಿರುದ್ಧ ಮುಸ್ಲಿಮರು ಏಕತೆಯಿಂದಿರಬೇಕು ಎಂದು ಕರೆ ನೀಡಿದೆ.

‘‘ಭಯೋತ್ಪಾದಕರಿಗೆ ದಾಟಲು ಇನ್ನು ಯಾವುದೇ ಲಕ್ಷ್ಮಣರೇಖೆಗಳು ಉಳಿದಿಲ್ಲ. ನಾವು ಒಂದಾಗಿ ನಿಲ್ಲದಿದ್ದರೆ ಸುನ್ನಿಗಳು ಮತ್ತು ಶಿಯಾಗಳಿಬ್ಬರೂ ಬಲಿಪಶುಗಳಾಗುತ್ತಾರೆ’’ ಎಂದು ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಝಾರಿಫ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News