ವಿದೇಶ ಪ್ರವಾಸ: ವಾಜಪೇಯಿ,ಮನಮೋಹನ್‌ರನ್ನು ಮೀರಿಸಿದ ಮೋದಿ!
ಹೊಸದಿಲ್ಲಿ, ಜು.6: ಪ್ರಧಾನ ಮಂತ್ರಿ ನರೇಂದ್ರ ಮೋದಿ ತನ್ನ ಎರಡು ವರ್ಷಗಳ ಅಧಿಕಾರದ ಅವಧಿಯಲ್ಲಿ ತನ್ನ ಪೂರ್ವಾಧಿಕಾರಿಗಳಾದ ಮನಮೋಹನ್ ಸಿಂಗ್ ಹಾಗೂ ಅಟಲ್ ಬಿಹಾರಿ ವಾಜಪೇಯಿಗಿಂತಲೂ ಅಧಿಕ ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ.
ಮೋದಿ ಗುರುವಾರದಿಂದ ನಾಲ್ಕು ರಾಷ್ಟ್ರಗಳ ಆಫ್ರಿಕ ಪ್ರವಾಸಕ್ಕೆ ತೆರಳಲು ಸಜ್ಜಾಗಿದ್ದಾರೆ. 2014ರ ಮೇನಲ್ಲಿ ಪ್ರಧಾನಿಯಾದ ಬಳಿಕ ಮೋದಿ ಅವರ 24ನೆ ವಿದೇಶಿ ಪ್ರವಾಸ ಇದಾಗಿದೆ. ಮೋದಿ ಈಗಾಗಲೇ 38 ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ.
ಎನ್‌ಡಿಎ ಸರಕಾರ ಮೊದಲ ಬಾರಿ 1999-2004ರ ತನಕ ಅಧಿಕಾರದಲ್ಲಿದ್ದಾಗ ವಾಜಪೇಯಿ 19 ಬಾರಿ ವಿದೇಶ ಪ್ರವಾಸ ಕೈಗೊಂಡು 26 ದೇಶಗಳಿಗೆ ಭೇಟಿ ನೀಡಿದ್ದರು. ಮೋದಿ ಈಗಾಗಲೇ ವಾಜಪೇಯಿ ದಾಖಲೆಯನ್ನು ಮುರಿದಿದ್ದಾರೆ.
ಮನಮೋಹನ್ ಸಿಂಗ್, ವಾಜಪೇಯಿಗಿಂತ ಹೆಚ್ಚು ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. 2004ರ ಮೇ ಹಾಗೂ 2006ರ ಜುಲೈ ನಡುವೆ 16 ಬಾರಿ ವಿದೇಶಕ್ಕೆ ತೆರಳಿ 16 ದೇಶಗಳಿಗೆ ಭೇಟಿ ನೀಡಿದ್ದಾರೆ. ವಾಜಪೇಯಿ ಪ್ರಧಾನಿಯಾಗಿ ಮೊದಲ ಎರಡು ವರ್ಷದಲ್ಲಿ ಅಮೆರಿಕ ಹಾಗೂ ಯುರೋಪ್ ದೇಶಗಳಿಗೆ ಕೇವಲ ಮೂರು ಬಾರಿ ಭೇಟಿ ನೀಡಿದ್ದರು.
ಮೋದಿ ನೆರೆಯ ರಾಷ್ಟ್ರ ಭೂತಾನ್‌ಗೆ ಭೇಟಿ ನೀಡುವ ಮೂಲಕ ವಿದೇಶ ಪ್ರವಾಸವನ್ನು ಆರಂಭಿಸಿದ ಏಕೈಕ ಪ್ರಧಾನಿ. ಮೋದಿ ಯುರೋಪ್ ಹಾಗೂ ಅಮೆರಿಕ ದೇಶಕ್ಕೆ 9ಬಾರಿ ಭೇಟಿ ನೀಡಿದ್ದು, ಮೋದಿ ಭೇಟಿಯಿಂದ ಭಾರತ- ಪಶ್ಚಿಮ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ಬಲ ಪಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಆಂಗ್ಲಪತ್ರಿಕೆ ನಡೆಸಿದ ಸಮೀಕ್ಷೆಯ ಪ್ರಕಾರ, ಮೋದಿ ತನ್ನ ಎರಡು ವರ್ಷಗಳ ಅಧಿಕಾರದ ಅವಧಿಯಲ್ಲಿ ಅಮೆರಿಕದ ಅಧ್ಯಕ್ವ ಬರಾಕ್ ಒಬಾಮಗಿಂತಲೂ ಹೆಚ್ಚು ಏರ್ ಮೈಲುಗಳ ದೂರ ಪ್ರಯಾಣಿಸಿದ್ದಾರೆ. 2009ರಿಂದ 2011ರ ನಡುವೆ ಕೇವಲ 25 ರಾಷ್ಟ್ರಗಳಿಗೆ ಭೇಟಿ ನೀಡಿರುವ ಒಬಾಮ 1,56,336 ಏರ್ ಮೈಲು ಕ್ರಮಿಸಿದ್ದಾರೆ. ಮೋದಿ 2014ರ ಮೇ ಹಾಗೂ 2016ರ ಮೇ ನಡುವೆ ವಿಮಾನದಲ್ಲಿ 1,64, 187 ಮೈಲು ದೂರ ಪ್ರಯಾಣಿಸಿದ್ದಾರೆ.
ವರ್ಷವಿಡೀ ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಮೋದಿಯನ್ನು ವಿಪಕ್ಷಗಳು ಟೀಕಿಸುತ್ತಾ ಬಂದಿವೆ. ವಿದೇಶ ಪ್ರವಾಸ ಕಡಿಮೆ ಮಾಡುವಂತೆಯೂ ಕಾಂಗ್ರೆಸ್‌ನ ಉಪಾಧ್ಯಕ್ಷ ರಾಹುಲ್ ಗಾಂಧಿ ಸಲಹೆ ನೀಡಿದ್ದರು.