ಮಾನಸಿಕ ಅಸ್ವಸ್ಥಗೊಂಡಿದ್ದ ಯುವಕ ಮರಳಿ ಪೋಷಕರ ಮಡಿಲು ಸೇರಿದ
ಕಾಸರಗೋಡು, ಜು.6: ಮಾನಸಿಕವಾಗಿ ಅಸ್ವಸ್ಥಗೊಂಡು ಬೀದಿಪಾಲಾಗಿದ್ದ ಛತ್ತೀಸ್‌ಗಢದ ಯುವಕನಿಗೆ ಬೆಳಕಾಗಿ ಮಂಜೇಶ್ವರ ಪಾವೂರಿನ ಸ್ನೇಹಾಲಯ ಮಾದರಿಯಾಗಿದೆ.
ಒಂದೂವರೆ ವರ್ಷ ಮಾನಸಿಕ ರೋಗಕ್ಕೆ ತುತ್ತಾಗಿ ಬೀದಿಪಾಲಾಗಿದ್ದ ಛತ್ತೀಸ್ ಘಡ್ ಚಂಪಾ ಜಿಲ್ಲೆಯ ಕುರ್ದಾ ಗ್ರಾಮದ ಕೃಷ್ಣ ಕುಮಾರ್ ಎಂಬ 30 ವರ್ಷದ ಯುವಕ ಈಗ ಪೋಷಕರ ಮಡಿಲು ಸೇರಿದ್ದಾನೆ.
ಆರು ತಿಂಗಳ ಹಿಂದೆ ಮಂಗಳೂರು ಸ್ಟೇಟ್‌ಬ್ಯಾಂಕ್ ಬಳಿ ಆಹಾರಕ್ಕಾಗಿ ತಡಕಾಡುತ್ತಿದ್ದ ಕೃಷ್ಣ ಕುಮಾರ್ನನ್ನು ಸ್ನೇಹಾಲಯದ ಜೋಸೆಫ್ ಕ್ರಾಸ್ತ ಮತ್ತು ಬಳಗ ಮಂಜೇಶ್ವರ ಪಾವೂರಿನಲ್ಲಿರುವ ಸ್ನೇಹಾಲಯಕ್ಕೆ ಕರೆದೊಯ್ದಿದ್ದರು. ಅಲ್ಲಿ ಈತನಿಗೆ ಚಿಕಿತ್ಸೆ ನೀಡಲಾಗಿದ್ದು, ಇದೀಗ ಸಂಪೂರ್ಣ ಗುಣಮುಖನಾಗಿದ್ದಾನೆ. ಈತ ನೀಡಿದ ವಿಳಾಸದ ಸಹಾಯದಿಂದ ಸ್ನೇಹಾಲಯದ ಮುಖ್ಯಸ್ಥರು ಈತನ ಮನೆಯವರನ್ನು ಸಂಪರ್ಕಿಸಿದ್ದು, ಇದೀಗ ಪೋಷಕರ ಮಡಿಲು ಸೇರುವಂತಾಗಿದ್ದಾನೆ.
ಕೃಷ್ಣ ಕುಮಾರ್ ಛತ್ತೀಸ್‌ಗಢ ಜಹಾಂಗೀರ್ನ ಚಂಪಾ ಜಿಲ್ಲೆಯ ಕುರ್ದಾ ಗ್ರಾಮದವನು. ಫಿರಾದ್ ಕುಮಾರ್ -ಪಂಪಾ ಗುವಾರ್ ದಂಪತಿಯ ಎಂಟು ಮಕ್ಕಳಲ್ಲಿ ಈತ ನಾಲ್ಕನೆಯವನು. ಏಳನೆ ತರಗತಿ ತನಕ ಶಿಕ್ಷಣ ಪಡೆದಿದ್ದಾನೆ. ಒಂದೂವರೆ ವರ್ಷಗಳ ಹಿಂದೆ ಈತ ದಿಢೀರ್ ಆಗಿ ನಾಪತ್ತೆಯಾಗಿದ್ದ. ಮನೆಯವರು ಹುಡುಕಾಡಿದರೂ ಈತನ ಪತ್ತೆಯಾಗಲಿಲ್ಲ. ಪೊಲೀಸರಿಗೂ ದೂರು ನೀಡಿದ್ದರು. ಆದರೂ ಈತ ಪತ್ತೆಯಾಗದ ಹಿನ್ನೆಲೆಯಲ್ಲಿ ಮನೆಯವರು ಕಂಗಾಲಾಗಿದ್ದರು. ಕೃಷ್ಣ ಕುಮಾರ್ ಸ್ನೇಹಾಲಯದಲ್ಲಿರುವ ಮಾಹಿತಿ ತಿಳಿದು ಆಗಮಿಸಿದ ಕೃಷ್ಣ ಕುಮಾರ್ನ ತಂದೆ ಫಿರಾದ್ ಕುಮಾರ್ ಹಾಗೂ ಸಂಬಂಧಿಕ ಕೃಷ್ಣ ಕುಮಾರ್ ನನ್ನು ಊರಿಗೆ ಕರೆದುಕೊಂಡು ತೆರಳಿದ್ದು, ಮಂಗಳೂರಿನಿಂದ ರೈಲು ಮೂಲಕ ಚೆನ್ನೈಗೆ ತೆರಳಿರುವ ಇವರು, ಎರಡು ದಿನಗಳೊಳಗೆ ಛತ್ತೀಸ್ಗಢಕ್ಕೆ ತಲುಪಲಿದ್ದಾರೆ.
ಬೀದಿಪಾಲಾಗಿದ್ದ ಮಗನಿಗೆ ಆರೈಕೆ, ಆಶ್ರಯ ನೀಡಿ ಮತ್ತೆ ಹೊಸ ಜೀವನ ನೀಡಿದ ಜೋಸೆಫ್ ಕ್ರಾಸ್ತ ಮತ್ತು ಸ್ನೇಹಾಲಯಕ್ಕೆ ಕೃಷ್ಣಕುಮಾರ್‌ರ ತಂದೆ ಫಿರಾದ್ ಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.