×
Ad

ಹಳದಿ ಲೋಹ ಭಾರೀ ದುಬಾರಿ

Update: 2016-07-06 19:20 IST

ಹೊಸದಿಲ್ಲಿ, ಜು.6: ಹಳದಿ ಲೋಹ ಮತ್ತೆ ಗಗನಮುಖಿಯಾಗಿದೆ. ಬುಧವಾರ ಒಂದೇ ದಿನ 10 ಗ್ರಾಂಗೆ 400 ರೂಪಾಯಿಯಷ್ಟು ತುಟ್ಟಿಯಾದ ಬಂಗಾರ, 28 ತಿಂಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ.

10 ಗ್ರಾಂ ಚಿನ್ನದ ಬೆಲೆ 31,050 ಆಗಿದೆ. ಚಿನ್ನದಲ್ಲಿ ಹೂಡಿಕೆ ಮಾಡುವುದು ಅತ್ಯಂತ ಸುರಕ್ಷಿತ ಎಂಬ ಮನೋಭಾವ ಹೂಡಿಕೆದಾರರಲ್ಲಿ ಮೂಡಿರುವುದು ಹಾಗೂ ಧನಾತ್ಮಕ ಜಾಗತಿಕ ಅಂಶಗಳು ಇದಕ್ಕೆ ಕಾರಣ.ಅಂತೆಯೇ ದೇಶೀಯ ಮಾರುಕಟ್ಟೆಯಲ್ಲಿ ಕೂಡಾ ಜುವೆಲ್ಲರ್‌ಗಳು ಖರೀದಿಗೆ ಉತ್ಸಾಹ ತೋರಿದ್ದಾರೆ.

ಬೆಳ್ಳಿ ಕೂಡಾ 750 ರೂಪಾಯಿಯಷ್ಟು ಚೇತರಿಕೆ ದಾಖಲಿಸಿ, ಕೆ.ಜಿ.ಗೆ 47 ಸಾವಿರಕ್ಕೆ ಕೊನೆಗೊಂಡಿದೆ. ಕೈಗಾರಿಕಾ ಘಟಕಗಳು ಮತ್ತು ಬೆಳ್ಳಿ ನಾಣ್ಯ ತಯಾರಕರಿಂದ ಬೇಡಿಕೆ ಹೆಚ್ಚಿರುವುದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ವ್ಯಾಪಾರಿಗಳ ಪ್ರಕಾರ ಬ್ರೆಕ್ಸಿಟ್ ಪರಿಣಾಮ ಮತ್ತಷ್ಟು ಪ್ರಬಲಗೊಂಡಂತೆ ಕಾಣುತ್ತಿದ್ದು, ಇದು ಚಿನ್ನದ ಬಗ್ಗೆ ಹೂಡಿಕೆದಾರರ ಒಲವಿಗೆ ಕಾರಣವಾಗಿದೆ. ಜಾಗತಿಕ ಆರ್ಥಿಕತೆ ಚೇತರಿಕೆ ಲಕ್ಷಣಗಳು ಕ್ಷೀಣವಾಗಿರುವುದರಿಂದ ಹೂಡಿಕೆದಾರರು ಈ ಅಮೂಲ್ಯ ಲೋಹಕ್ಕೇ ಮುಗಿ ಬಿದ್ದಿದ್ದಾರೆ. ಇದರಿಂದಾಗಿ ಎರಡು ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಬೆಲೆ ತಲುಪಿದೆ.

ಜಾಗತಿಕವಾಗಿ ಚಿನ್ನದ ಬೆಲೆ ಔನ್ಸ್‌ಗೆ 1,371,39 ಡಾಲರ್‌ಗಳಿಗೆ ಏರಿದೆ. ಇದು 2014ರ ಮಾರ್ಚ್‌ನಿಂದೀಚೆಗೆ ಶೇಕಡ 11ರಷ್ಟು ಏರಿದಂತಾಗಿದೆ. ಬೆಳ್ಳಿಯ ಬೆಲೆ ಔನ್ಸ್‌ಗೆ 20.41 ಡಾಲರ್ ಆಗಿದ್ದು, ಶೇಕಡ 2.4ರಷ್ಟು ಏರಿಕೆ ಕಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News