ಸರ್ವಋತು ಮೀನುಗಾರಿಕಾ ಬಂದರಿಗಾಗಿ ಬೀದಿಗಿಳಿದ ಮೀನುಗಾರರು

Update: 2016-07-07 07:55 GMT

ಮಂಗಳೂರು,ಜೂ.7: ಕಳೆದ 50 ವರ್ಷಗಳಿಂದ ಸರ್ವಋತು ಮೀನುಗಾರಿಕಾ ಬಂದರು ನಿರ್ಮಾಣದ ಯೋಜನೆ ನೆನೆಗುದಿಗೆ ಬಿದ್ದಿದ್ದು, ಅದನ್ನು ತಕ್ಷಣ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಂಘದ ನೇತೃತ್ವದಲ್ಲಿ ಇಂದು ಮೀನುಗಾರರು ಧರಣಿ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯದ ಮೀನುಗಾರಿಕಾ ಸಚಿವರು ಮೀನುಗಾರರ ಬೇಡಿಕೆಗೆ ತಕ್ಷಣ ಸ್ಪಂದಿಸಬೇಕು. ಅವರು ಸಹಕರಿಸಿದರೆ, ಕೇಂದ್ರದ ಜತೆ ಸೇರಿ ಮುಂದಿನ 15 ದಿನಗಳಲ್ಲಿ ಯೋಜನೆ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮೀನುಗಾರ ಮುಖಂಡ ವಾಸುದೇವ ಬೋಳೂರು, ನವಮಂಗಳೂರು ಬಂದರು ನಿರ್ಮಾಣಕ್ಕಾಗಿ 50 ವರ್ಷಗಳ ಹಿಂದೆ ಸರ್ವಋತು ಮೀನುಗಾರಿಕಾ ಬಂದರು ನಿರ್ಮಾಣದ ಆಶ್ವಾಸನೆ ನೀಡಿ ಮೀನುಗಾರರನ್ನು ಒಕ್ಕಲೆಬ್ಬಿಸಲಾಗಿತ್ತಾದರೂ, ಬಂದರು ನಿರ್ಮಾಣದ ಆಶ್ವಾಸನೆ ಮಾತ್ರ ಇನ್ನೂ ಈಡೇರಿಲ್ಲ ಎಂದು ಬೇಸರಿಸಿದರು.

ಈಗಾಗಲೇ ಕೇಂದ್ರ ಸರಕಾರದಿಂದ ಕುಳಾಯಿ ಮೀನುಗಾರಿಕಾ ಬಂದರಿಗೆ 230 ಕೋಟಿ ರೂ. ಮಂಜೂರಾಗಿದೆ. ಯೋಜನೆಗೆ ಪರಿಸರ ಮಾಲಿನ್ಯ ಮತ್ತು ಕರಾವಳಿ ಸಿಆರ್‌ಝೆಡ್‌ಗೆ ಸಂಬಂಧಿಸಿದ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ನಾಲ್ಕು ತಿಂಗಳು ಕಳೆದರೂ ಶಿಫಾರಸ್ಸು ಪತ್ರವನ್ನು ಕೇಂದ್ರ ಸರಕಾರಕ್ಕೆ ಕಳುಹಿಸದೆ ಮೀನುಗಾರರನ್ನು ಸತಾಯಿಸಲಾಗುತ್ತಿದೆ. ಜುಲೈ 18ರೊಳಗೆ ಈ ಯೋಜನೆ ಕೇಂದ್ರದಲ್ಲಿ ಮಂಜೂರಾಗದಿದ್ದಲ್ಲಿ ಸಂಪೂರ್ಣ ಯೋಜನೆಯೇ ರದ್ದಾಗಲಿದೆ ಎಂದು ಅವರು ಹೇಳಿದರು.

ಸರ್ವ ಋತು ಬಂದರು ನಿರ್ಮಾಣದ ಜತೆಯಲ್ಲೇ, ಎಂಎಸ್‌ಇಝೆಡ್‌ನಿಂದ ಮೀನುಗಾರರಿಗೆ ಆಗಿರುವ ತೊಂದರೆಗೆ ಪರಿಹಾರವಾಗಿ ನೀಡಿರುವ 1 ಕೋಟಿ ರೂ.ನ್ನು ಮೀನುಗಾರರ ಸಂಘದ ಖಾತೆಗೆ ಜಮಾ ಮಾಡಬೇಕು. ನಾಡದೋಣಿ ಮೀನುಗಾರರಿಗೆ 400 ಲೀಟರ್‌ನಂತೆ 12 ತಿಂಗಳು ಸೀಮೆಎಣ್ಣೆ ಒದಗಿಸಬೇಕು ಎಂಬ ಇತರ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಈ ಸಂದರ್ಭ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಚೇತನ್ ಬೆಂಗ್ರೆ, ರಾಮಚಂದರ್ ಬೈಕಂಪಾಡಿ, ಗಂಗಾಧರ ಹೊಸಬೆಟ್ಟು, ರಾಜೀವ್ ಕಾಂಚನ್, ಯಾದವ್, ಗಿಲ್‌ನೆಟ್ ಅಲಿಹಸನ್, ಯೋಗೀಶ್ ಶೆಟ್ಟಿ ಜೆಪ್ಪು, ಉಮಾನಾಥ್ ಕೋಟ್ಯಾನ್, ಸಂಜೀವ ಮಠಂದೂರು ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News