ಡಲ್ಲಾಸ್‌ನಲ್ಲಿ ನಾಲ್ವರು ಪೊಲೀಸರು ಹತ, ಏಳು ಮಂದಿಗೆ ಗಾಯ
ಡಲ್ಲಾಸ್, ಜು.8: ಇಲ್ಲಿ ನಡೆದ ಪ್ರತಿಭಟನೆಯ ವೇಳೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಪೊಲೀಸ್ ಅಧಿಕಾರಿಗಳ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಅಧಿಕಾರಿಗಳು ಮೃತಪಟ್ಟಿದ್ದು,ಇತರ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಇತ್ತೀಚೆಗೆ ಪೊಲೀಸರು ಇಬ್ಬರು ಕರಿಯರನ್ನು ಹತ್ಯೆಗೈದಿರುವುದನ್ನು ಖಂಡಿಸಿ ಗುರುವಾರ ತಡರಾತ್ರಿ ಪ್ರತಿಭಟನೆ ನಡೆದಿದೆ. ಸಿಟಿ ಹಾಲ್‌ನಿಂದ ಬೃಹತ್ ಪ್ರತಿಭಟನಾ ರ್ಯಾಲಿ ಸಾಗುತ್ತಿದ್ದಾಗಲೇ ಇಬ್ಬರು ದುಷ್ಕರ್ಮಿಗಳು ಗುಂಡಿನ ಹಾರಾಟ ನಡೆಸಿದ್ದಾರೆ. ಇದರಿಂದ ಜನರು ಚದುರಿಹೋದರೆ, ಗುಂಡಿನ ದಾಳಿಗೆ ನಾಲ್ವರು ಪೊಲೀಸರು ಹತರಾಗಿದ್ದಾರೆ. ಮೂವರು ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಲ್ಲಾಸ್ ಪೊಲೀಸ್ ಮುಖ್ಯಸ್ಥ ಡೇವಿಡ್ ಒ’ಬ್ರೌನ್ ಹೇಳಿದ್ದಾರೆ.
ಶಂಕಿತ ದುಷ್ಕರ್ಮಿ ಪೊಲೀಸ್ ಕಸ್ಟಡಿಗೆ
ಪೊಲೀಸರ ಮೇಲೆ ಗುಂಡು ಹಾರಾಟ ನಡೆಸಿದ ಇಬ್ಬರು ಶಂಕಿತರ ಪೈಕಿ ಓರ್ವನನ್ನು ಕಸ್ಟಡಿಗೆ ಒಪ್ಪಿಸಲಾಗಿದೆ.
ಗುಂಡಿನ ದಾಳಿ ನಡೆದ ತಕ್ಷಣ ಡಲ್ಲಾಸ್ ಪೊಲೀಸ್ ಇಲಾಖೆ ಶಂಕಿತ ಓರ್ವ ದುಷ್ಕರ್ಮಿಯ ಭಾವಚಿತ್ರವನ್ನು ಟ್ವೀಟರ್‌ನಲ್ಲಿ ಹಾಕಿತ್ತು. ಭಾವಚಿತ್ರ ಬಹಿರಂಗವಾದ ಕೆಲವೇ ನಿಮಿಷದಲ್ಲಿ ಸ್ವತಃ ದುಷ್ಕರ್ಮಿ ಪ್ರತ್ಯಕ್ಷನಾಗಿದ್ದಾನೆ ಎಂದು ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ.
ಡಲ್ಲಾಸ್ ಸ್ವಾಟ್ ಅಧಿಕಾರಿಗಳೊಂದಿಗೆ ಗುಂಡಿನ ದಾಳಿ ನಡೆಸಿದ ಶಂಕಿತನನ್ನು ಕಸ್ಟಡಿಗೆ ಪಡೆಯಲಾಗಿದೆ. ಪೊಲೀಸರು ಬಿಡುಗಡೆ ಮಾಡಿರುವ ಚಿತ್ರದಲ್ಲಿರುವ ವ್ಯಕ್ತಿ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದು, ತಾನು ಮುಗ್ದ ಎಂದು ಹೇಳಿಕೊಂಡಿದ್ದಾನೆ. ಚಿತ್ರದಲ್ಲಿರುವುದು ನನ್ನ ಸಹೋದರ ಎಂದು ಹೇಳಿದ್ದಾನೆ.