ರಮಝಾನ್ ನಲ್ಲಿ ಮಸ್ಜಿದುಲ್ ಹರಾಂಗೆ 2.3 ಕೋಟಿ ಯಾತ್ರಿಗಳ ಭೇಟಿ
ರಿಯಾದ್, ಜು.8 : ಪವಿತ್ರ ರಮಝಾನ್ ತಿಂಗಳಿನಲ್ಲಿ ಮಕ್ಕಾದ ಗ್ರಾಂಡ್ ಮಸೀದಿಗೆ ಒಟ್ಟು 23,164,319 ಯಾತ್ರಾರ್ಥಿಗಳು ಭೇಟಿ ನೀಡಿದ್ದಾರೆಂದು ಹಜ್ ಹಾಗೂ ಉಮ್ರಾ ಸಚಿವಾಲಯ ಮಾಹಿತಿ ನೀಡಿದೆ.
ಗ್ರಾಂಡ್ ಮಸೀದಿಗೆ ಭೇಟಿ ನೀಡಿದ ಯಾತ್ರಾರ್ಥಿಗಳನ್ನು 1,463,543 ವಾಹನಗಳಲ್ಲಿ ಸಾಗಿಸಲಾಗಿತ್ತು ಎಂದೂ ಸಚಿವಾಲಯ ತಿಳಿಸಿದೆಯಲ್ಲದೆ ಯಾತ್ರಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ಅನಾನುಕೂಲತೆಯಾಗದಂತೆಯೂ ಆಂತರಿಕ ವ್ಯವಹಾರಗಳ ಸಚಿವಾಲಯ ಕ್ರಮ ಕೈಗೊಂಡಿತ್ತು ಎಂದು ಹೇಳಿದೆ. ಮಕ್ಕಾ ನಗರದ ಪೊಲೀಸರೂ ಮಸೀದಿಗೆ ಆಗಮಿಸುತ್ತಿದ್ದ ಖಾಸಗಿ ಹಾಗೂ ಸರಕಾರಿ ವಾಹನಗಳ ಸಂದಣಿಯನ್ನು ನಿಯಂತ್ರಿಸಲು ಸಾಕಷ್ಟು ಶ್ರಮ ಪಟ್ಟಿದ್ದಾರೆ, ಎಂದು ಸಚಿವಾಲಯ ಹೇಳಿದೆ.
ಹರಾಮ್-ಅಲ್-ಶರೀಫ್ ನತ್ತ ಆಗಮಿಸುತ್ತಿದ್ದ ವಾಹನಗಳು ವ್ಯವಸ್ಥಿತವಾಗಿ ಸಾಗುವಂತೆ ನೋಡಲು ಕ್ರಮ ಕೈಗೊಳ್ಳಲಾಗಿತ್ತೆಂದೂ ಹೇಳಲಾಗಿದೆಯಲ್ಲದೆ ಟ್ರಾಫಿಕ್ ಪೊಲೀಸರಿಗೆ ವಾಹನ ನಿಯಂತ್ರಿಸಲು ಸಹಕಾರಿಯಾಗುವಂತೆ ವಿಶೇಷ ಉಪಕರಣಗಳನ್ನೂ ನೀಡಲಾಗಿತ್ತೆಂದು ತಿಳಿಸಲಾಗಿದೆ.
ಒಟ್ಟಾರೆಯಾಗಿ ರಮಝಾನ್ ತಿಂಗಳಲ್ಲಿ ಬಂದ ಲಕ್ಷಾಂತರ ಯಾತ್ರಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯುಂಟಾಗದಂತೆ ನೋಡಿಕೊಳ್ಳಲು ಸಹಕರಿಸಿದ ಪೊಲೀಸ್ ಇಲಾಖೆ ಹಾಗೂ ಎಲ್ಲಾ ಸರಕಾರಿ ಇಲಾಖೆಗಳಿಗೂ ಸಚಿವಾಲಯ ಕೃತಜ್ಞತೆ ಸಲ್ಲಿಸಿದೆ.