ಡಿವೈಎಸ್ಪಿ ಗಣಪತಿ ಹೆಸರಿಸಿರುವವರನ್ನು ಬಂಧಿಸದಿದ್ದರೆ ಜಿಲ್ಲಾ ಬಂದ್: ಸಂಸದ ನಳಿನ್
ಮಂಗಳೂರು,ಜು.8: ಸಾವಿಗೆ ಶರಣಾಗುವ ಮುಂಚೆ ಡಿವೈಎಸ್ಪಿ ಗಣಪತಿ ಯಾರೆಲ್ಲಾ ಹೆಸರನ್ನು ಹೇಳಿದ್ದಾರೋ ಸರಕಾರ ತಕ್ಷಣ ಅವರನ್ನು ಬಂಧಿಸುವ ಕಾರ್ಯ ಮಾಡಬೇಕು. ಇಲ್ಲವಾದಲ್ಲಿ ಜಿಲ್ಲಾ ಬಂದ್ ಮಾಡಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದ ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ಇಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ನರಸತ್ತ ಸರಕಾರ ಆಡಳಿತ ನಡೆಸುತ್ತಿದೆ. ರಕ್ಷಣೆ ನೀಡುವವರಿಗೆ ರಕ್ಷಣೆ ನೀಡಲಾಗದ ಸರಕಾರ ಜನಸಾಮಾನ್ಯರಿಗೆ ಯಾವ ರೀತಿ ರಕ್ಷಣೆ ನೀಡಬಲ್ಲದು ಎಂದು ತೀಕ್ಷ್ಮವಾಗಿ ಪ್ರತಿಕ್ರಿಯಿಸಿದರು.
ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ವಿಷಯವನ್ನು ಇತರ ಸಂಸದರ ಜೊತೆ ಸೇರಿ ಲೋಕಸಭೆಯಲ್ಲೂ ಚರ್ಚಿಸಲಾಗುವುದು. ಗಣಪತಿಯವರು ದ.ಕ. ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿರುವುದರಿಂದ ಅವರು ತನ್ನ ಸಾವಿಗೆ ಮೊದಲು ಹೆಸರಿಸಿರುವರನ್ನು ಸರಕಾರ ಬಂಸದಿದ್ದರೆ ಜಿಲ್ಲೆಯಲ್ಲಿ ಬಂದ್ ನಡೆಸಿ ಪ್ರತಿಭಟನೆ ನಡೆಸುವುದು ಅನಿವಾರ್ಯ. ಇದು ಬೇಡವೆಂದಾದಲ್ಲಿ ಘಟನೆಯ ಹಿಂದಿನ ಸತ್ಯವನ್ನು ರಾಜ್ಯ ಸರಕಾರ ಬಹಿರಂಗಪಡಿಸಬೇಕು ಎಂದು ನಳಿನ್ ಒತ್ತಾಯಿಸಿದರು.
ಗಣಪತಿಯವರ ಆತ್ಮಹತ್ಯೆ ನಿಜಕ್ಕೂ ದುಃಖಕರ ಸಂಗತಿ. ಆದರೆ ಅವರು ಸಾವಿಗೆ ಮುಂಚೆ ಹೆಸರಿಸಿರುವವರು ಆತ್ಮಹತ್ಯೆಗೆ ಪ್ರೇರಣೆ ನೀಡಿದವರಾಗಿರುವುದರಿಂದ ಅವರನ್ನು ಬಂಧಿಸಿ ತನಿಖೆ ಕೈಗೊಳ್ಳಬೇಕು.ಅಧಿಕಾರಿಗಳ ಮೇಲೆ ರಾಜಕಾರಣಿಗಳು, ಅಧಿಕಾರಿಗಳ ಒತ್ತಡ ಎಷ್ಟಿದೆ ಎಂಬುದಕ್ಕೆ ಗಣಪತಿ ಸಾವು ಒಂದು ಸ್ಪಷ್ಟ ಸಾಕ್ಷಿ. ಅಧಿಕಾರಿಗಳನ್ನು ಬಂಧನದಲ್ಲಿಡುವ ಕೆಲಸ ಕಾಂಗ್ರೆಸನಿಂದ ಆಗಿದೆ. ಅಧಿಕಾರಿಗಳನ್ನು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕು. ಮುಖ್ಯಮಂತ್ರಿಯವರು ಎಚ್ಚೆತ್ತುಕೊಳ್ಳಬೇಕು ಎಂದು ನಳಿನ್ ಹೇಳಿದರು.