ಕೋಟೆಕಾರು: ಶಾಲೆಗೂ ಕನ್ನ ಹಾಕಿದ ಕಳ್ಳರು

Update: 2016-07-08 10:56 GMT

ಉಳ್ಳಾಲ, ಜು.8: ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರು ಸ್ಟೆಲ್ಲಾ ಮೆರೀಸ್ ಆಂಗ್ಲ ಮಾಧ್ಯಮ ಶಾಲೆಗೆ ಗುರುವಾರ ರಾತ್ರಿ ಕಳ್ಳರು ನುಗ್ಗಿ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನನ್ನು ಕಳವುಗೈದು ಪರಾರಿಯಾದ ಘಟನೆ ನಡೆದಿದೆ.

ಗುರುವಾರ ಮಧ್ಯರಾತ್ರಿ ಕೋಟೆಕಾರಿನ ಕಾರ್ಮೆಲ್ ಆಂಗ್ಲ ಮಾಧ್ಯಮ ಹಿರಿಯ ಮತ್ತು ಫ್ರೌಢ ಶಾಲಾ ಕಟ್ಟಡದ ಕಚೇರಿಯ ಕಿಟಕಿಯ ಸರಳುಗಳನ್ನು ಮುರಿದು ಒಳನುಗ್ಗಿದ ಕಳ್ಳರು ಮೇಜು, ಕಪಾಟುಗಳನ್ನು ತೆರೆದು ನಗದು ಹಣಕ್ಕಾಗಿ ಹುಡುಕಾಟ ನಡೆಸಿದ್ದರು. ಬಳಿಕ ಲ್ಯಾಪ್‌ಟ್ಯಾಪ್ ಮತ್ತು ಶಾಲಾ ಕಚೇರಿಯ ಉಪಯೋಗಕ್ಕೆ ಬಳಸುತ್ತಿದ್ದ ಮೊಬೈಲ್ ಫೋನನ್ನು ದೋಚಿದ್ದಾರೆ.

ಕಳ್ಳರು ತಮ್ಮ ಕೈಚಳಕವನ್ನು ಇಷ್ಟಕ್ಕೆ ಮುಗಿಸದೆ ಶಾಲೆಯ ಆವರಣದೊಳಗಿರುವ ಸ್ಟೆಲ್ಲಾ ಮೆರೀಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಅನ್ನದಾಸೋಹದ ಕೊಠಡಿಯ ಶಟರ್ ಮುರಿದು ಒಳ ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿ ಪರಾರಿಯಾಗಿದ್ದಾರೆ. ಕಳ್ಳರು ತಮ್ಮ ಕಳ್ಳತನ ಕೃತ್ಯವು ಯಾರಿಗೂ ತಿಳಿಯದ ಹಾಗೆ ಕಟ್ಟಡದ ಪ್ರವೇಶ ದ್ವಾರದಲ್ಲೆ ಅಳವಡಿಸಲಾದ ಸಿಸಿ ಕ್ಯಾಮರಾವನ್ನು ತಿರುಗಿಸಿದ್ದು ಮಾತ್ರವಲ್ಲದೆ ಕಚೇರಿಯ ಒಳಗಿದ್ದ ಬೆಳೆಬಾಳುವ ಸಿಸಿ ಕ್ಯಾಮರಾದ ರಿಸೀವರನ್ನೇ ಕದ್ದೊಯ್ದಿದ್ದಾರೆ.

ಶುಕ್ರವಾರ ಬೆಳಗ್ಗೆ ಕಳ್ಳತನದ ಪ್ರಕರಣ ಬಯಲಾಗಿದ್ದು ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸ್ ಠಾಣಾ ಅಪರಾಧ ವಿಭಾಗದ ಉಪನಿರೀಕ್ಷಕ ರಾಜೇಂದ್ರ ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನದಳವನ್ನು ಕರೆಸಿ ತನಿಖೆ ನಡೆಸುತ್ತಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News