ತೊಕ್ಕೊಟ್ಟು: ಮಳೆಗೆ ಕುಸಿದು ಬಿದ್ದ ಮನೆ; ಕಂಗಾಲಾದ ಬಡಕುಟುಂಬ
ಉಳ್ಳಾಲ, ಜು.8: ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತೊಕ್ಕೊಟ್ಟು ಸಮೀಪದ ಅಂಬಿಕಾರೋಡ್‌ನ ಗಟ್ಟಿಸಮಾಜ ಸಬಾಭವನದ ಬಳಿ ಇರುವ ಮನೆಯೊಂದು ಕುಸಿದು ಬಿದ್ದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
ಅಂಬಿಕಾರೋಡ್‌ನ ಕಲಾವತಿ ಮೂಲ್ಯ(56)ಎಂಬವರ ಮನೆಯು ಧಾರಾಕಾರ ಮಳೆಗೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.
ಕಲಾವತಿಯವರ ಪತಿ ನಾರಾಯಣ ಅವರು ಕಳೆದ ಎಂಟು ತಿಂಗಳ ಹಿಂದಷ್ಟೆ ಅಕಾಲಿಕ ಮರಣ ಹೊಂದಿದ್ದರು. ಈ ಆಘಾತದಿಂದಲೇ ಕಲಾವತಿ ಅವರು ಹತ್ತನೆ ತರಗತಿಯಲ್ಲಿ ಕಲಿಯುತ್ತಿರುವ ತಮ್ಮ ಮಗನೊಂದಿಗೆ ಜೀವನ ನಿರ್ವಹಣೆಗೆ ಕಷ್ಟ ಎದುರಿಸುತ್ತಿದ್ದರು. ಇದೀಗ ತಾವು ವಾಸವಾಗಿದ್ದ ಮನೆಯೂ ಕೂಡಾ ಮಳೆಯ ಆರ್ಭಟಕ್ಕೆ ಕುಸಿದು ಬಿದ್ದಿರುವುದು ಅವರನ್ನು ಕಂಗಾಲಾಗಿಸಿದೆ.
ಘಟನಾ ಸ್ಥಳಕ್ಕೆ ಉಳ್ಳಾಲ ನಗರಸಭಾ ಗ್ರಾಮ ಕರಣಿಕ ಪೂರ್ಣಚಂದ್ರ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದಾರೆ. ಅಲ್ಲದೆ, ಕುಲಾಲ ಸಮುದಾಯದ ಹಿರಿಯ ಮುಖಂಡರಾದ ಸೀತಾರಾಮ ಬಂಗೇರ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಬಡ ವಿಧವೆಗೆ ಸೂರು ನಿರ್ಮಿಸಲು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.