ದೇರೇಬೈಲ್ ಮನೆಗಳ್ಳತನ ಪ್ರಕರಣದ ಆರೋಪಿಗಳ ಬಂಧನ

Update: 2016-07-08 12:00 GMT
ಬಂಧಿತ ಆರೋಪಿಗಳಿಂದ ವಶಪಡಿಸಿಕೊಂಡ ಸೊತ್ತುಗಳೊಂದಿಗೆ ಪೊಲೀಸ್ ತಂಡ

ಮಂಗಳೂರು, ಜು. 8; ದೇರೆಬೈಲ್ ಕೊಂಚಾಡಿಯಲ್ಲಿ ಮನೆಗೆಲಸದವರಿಂದ 18 ಲಕ್ಷ ರೂ. ವೌಲ್ಯದ ಕಳವು ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾವೂರು ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿ 17.38 ಲಕ್ಷ ರೂ. ನಗದು ಹಾಗೂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಚಂದ್ರಶೇಖರ್ ಅವರು ತಿಳಿಸಿದರು.

ಮಂಗಳೂರು ಪೊಲೀಸ್ ಕಮೀಷನರ್ ಅವರ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಆರೋಪಿಗಳಾದ ದಾರವಾಡ ಜಿಲ್ಲೆಯ ನವಲುಗುಂದದ ಅಂಬಣ್ಣ ಬಸಪ್ಪ ಜಾಡರ್ ಯಾನೆ ಅಂಬರೀಶ್ (25) ಮತ್ತು ಧಾರವಾಡ ಜಿಲ್ಲೆಯ ನವಲುಗುಂದದ ರಶೀದಾ ಯಾನೆ ಕಾಜಿ (23) ಅವರುಗಳು ಪತ್ರಿಕೆಯಲ್ಲಿ ಮನೆಗೆಲಸಕ್ಕೆ ಜನ ಬೇಕಾಗಿದ್ದಾರೆ ಎಂಬ ಜಾಹೀರಾತು ನೋಡಿ ದೇರೆಬೈಲ್ ಕೊಂಚಾಡಿಯ ನಾಗಕನ್ನಿಕಾ ದೇವಸ್ಥಾನ ರಸ್ತೆಯ ಬಳಿ ವಾಸವಿರುವ ಬಿಲ್ಡರ್ ಪಿ.ನರಸಿಂಹ ರಾವ್ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು.

ಕೆಲಸಕ್ಕೆ ಸೇರಿದ ಕೆಲವೆ ದಿನಗಳಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮನೆಯ ಕಪಾಟಿನಲ್ಲಿದ್ದ 18 ಲಕ್ಷ ನಗದನ್ನು ಹಾಗೂ 3 ಮೊಬೈಲ್ ಸೆಟ್‌ಗಳನ್ನು ಕಳವುಮಾಡಿಕೊಂಡು ಹೋಗಿದ್ದರು. ಕಳವು ಆರೋಪಿಗಳನ್ನು ಇಂದು ಬೆಳಗ್ಗೆ ಕುಳಾಯಿಯಲ್ಲಿ ಬಂಧಿಸಲಾಗಿದೆ. ಅವರಿಂದ 17,38,000 ರೂ. ನಗದು, ಕಳ್ಳತನ ಮಾಡಿದ ಹಣದಿಂದ ಖರೀದಿಸಿದ 9,700 ರೂ. ವೌಲ್ಯದ ಬೆಳ್ಳಿ ಹಾಗೂ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಆರೋಪಿ ಅಂಬಣ್ಣ ಬಸಪ್ಪ ಜಾಡರ್ ಯಾನೆ ಅಂಬರೀಷ್ 2007ರಲ್ಲಿ ಹುಬ್ಬಳಿಯ ಗೋಕುಲ್‌ರೋಡ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣದಲ್ಲಿ ಬಂಧಿತನಾಗಿ ಶಿಕ್ಷೆಗೊಳಗಾಗಿದ್ದ . ಈ ಸಂದರ್ಭದಲ್ಲಿ ಜೈಲಿನಿಂದ ತಪ್ಪಿಕೊಂಡು ನಂತರ ಬಿಜಾಪುರದಲ್ಲಿ ಮೋಟಾರ್ ಸೈಕಲ್ ಕಳವು ಪ್ರಕರಣದಲ್ಲಿ ಬಂಧಿತನಾಗಿ ಶಿಕ್ಷೆ ಮುಗಿದು ಬಿಡುಗಡೆಗೊಂಡಿದ್ದ. ಆತನ ಮತ್ತು ರಶೀದಾ ಯಾನೆ ಕಾಜಿಯ ಇನ್ನಷ್ಟು ಕೃತ್ಯಗಳ ಬಗ್ಗೆ ತನಿಖೆ ನಡೆಯಬೇಕಾಗಿದೆ ಎಂದು ತಿಳಿಸಿದರು.

ಆರೋಪಿಗಳಿಬ್ಬರು ಪತಿ ಪತ್ನಿಯೆಂದು ಕೆಲಸಕ್ಕೆ ಸೇರಿಕೊಂಡಿದ್ದರು. ಆರೋಪಿಗಳಿಬ್ಬರು ಶಿವ ಮತ್ತು ಜ್ಯೋತಿ ಎಂಬ ಹೆಸರಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಕಳವುಗೈದ ನಂತರ ಅವರಿಬ್ಬರು ಧಾರವಾಡ, ಉತ್ತರ ಕರ್ನಾಟಕದಲ್ಲಿ ತಿರುಗಾಡಿದ್ದು ಇಂದು ಅವರು ಕುಳಾಯಿಯಲ್ಲಿ ಬಾಡಿಗೆ ಮನೆಯನ್ನು ಹುಡುಕಲು ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಶೋಧ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೇಳಿದರು.

ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಎಸಿಪಿ ಉದಯನಾಯಕ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಎಂ.ಎ. ನಟರಾಜ್, ಪಿಎಸೈ ಉಮೇಶ್ ಕುಮಾರ್ ಎಂ.ಎನ್, ಎಎಸೈ ವನಜಾಕ್ಷಿ, ಸಿಬ್ಬಂದಿಯಾದ ವಿಶ್ವನಾಥ, ರಾಮಣ್ಣ ಶೆಟ್ಟಿ, ಬಾಲಕೃಷ್ಣ, ರಾಜಶೇಖರ ಗೌಡ, ಗಣೇಶ್ ಕುಮಾರ್, ಯಶವಂತ ರೈ ಮತ್ತು ನವಲಗುಂದ ಪಿಎಸೈ ಶಿವಯೋಗಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಕೆ.ಎಂ.ಶಾಂತರಾಜು, ಡಾ.ಸಂಜೀವ್ ಎಂ. ಪಾಟೀಲ್ ಉಪಸ್ಥಿತರಿದ್ದರು.

ಮನೆಗೆಲಸಕ್ಕೆ ಮತ್ತು ಸೆಕ್ಯೂರಿಟಿಗೆ ಯಾರನ್ನಾದರೂ ಸೇರಿಸುವ ಮುನ್ನ ಸಾರ್ವಜನಿಕರು ಪೊಲೀಸ್ ವೆರಿಫಿಕೇಶನ್ ಮಾಡಿಸಿಕೊಳ್ಳುವುದು ಉತ್ತಮ ಎಂದು ಕಮೀಷನರ್ ಚಂದ್ರಶೇಖರ್ ಎಂ. ತಿಳಿಸಿದ್ದಾರೆ. ಪ್ರತಿಯೊಬ್ಬರು ಕೆಲಸದವರನ್ನು ಸೇರಿಸಿಕೊಳ್ಳುವ ಮುನ್ನ ಅವರ ಪೂರ್ವಾಪರಗಳನ್ನು ತಿಳಿದುಕೊಳ್ಳಬೇಕು. ಹಾಗೂ ಅವರಿಂದ ಅಧಿಕೃತ ಫೋಟೊ ಐಡಿ ಕಾರ್ಡ್ ಹಾಗೂ ಯಾವುದೇ ಕೇಸುಗಳು ಇಲ್ಲವೆಂಬ ಬಗ್ಗೆ ಪೊಲೀಸ್ ವೆರಿಫಿಕೇಶನ್ ಮಾಡಿಸಿಕೊಂಡಿರುವ ಬಗ್ಗೆ ದಾಖಲೆ ಪಡೆದುಕೊಳ್ಳಬೇಕು. ಸಾರ್ವಜನಿಕರು ಮನೆಗಳಿಗೆ ಮತ್ತು ವಾನಿಜ್ಯ ಸಂಕೀರ್ಣಗಳಲ್ಲಿ ಸಿಸಿ ಕ್ಯಾಮರವನ್ನು ಅಳವಡಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News