×
Ad

'ಗ್ರಾನೈಟ್ ಮಾಫಿಯಾಕ್ಕೆ ಮೂಡುಬಿದಿರೆ ತಹಶೀಲ್ದಾರರಿಂದ ಲಂಚ ಸ್ವೀಕಾರ'

Update: 2016-07-08 18:08 IST

ಮೂಡುಬಿದಿರೆ, ಜು.8: ಕಲ್ಲಮುಂಡ್ಕೂರು ಗ್ರಾ.ಪಂ ವ್ಯಾಪ್ತಿಯ ನಿಡ್ಡೋಡಿಯ ಮಚ್ಚಾರು ಎಂಬಲ್ಲಿರುವ ಸರಕಾರಿ ಜಾಗದಲ್ಲಿ ಗ್ರಾನೈಟ್ ಮಾಫಿಯಾ ನಡೆಯುತ್ತಿದ್ದು, ಇದಕ್ಕೆ ತಹಶೀಲ್ದಾರ್ 50,000 ರೂ. ಲಂಚ ತೆಗೆದುಕೊಂಡು ಅನುಮತಿಯನ್ನು ನೀಡಿದ್ದಾರೆ ಎಂದು ಗ್ರಾಮಸ್ಥ ವಸಂತ ಶೆಟ್ಟಿ ಆರೋಪಿಸಿದ್ದಾರೆ.

ಕಲ್ಲಮುಂಡ್ಕೂರು ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ ಅವರ ಅಧ್ಯಕ್ಷತೆಯಲ್ಲಿ ನೀರುಡೆಯ ಗಣೇಶೋತ್ಸವವ ಸಮಿತಿಯ ಹಾಲ್‌ನಲ್ಲಿ ನಡೆದ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್‌ನ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಮಾತನಾಡಿದ ವಸಂತ್, ಮೊದಲಿಗೆ ಗ್ರಾಮಸಭೆಗೆ ತಹಶೀಲ್ದಾರ್ ಅವರು ಬಾರದೆ ಇರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗ್ರಾನೈಟ್ ಮಾಫಿಯ ನಡೆಯುತ್ತಿರುವ ಪರಿಸರದಲ್ಲಿ ಮನೆಗಳು ಇದ್ದರೂ ಅಲ್ಲಿ ಮನೆಗಳಿಲ್ಲವೆಂಬ ಹೇಳಿಕೆಯನ್ನು ತಹಶೀಲ್ದಾರ್ ನೀಡಿದ್ದಾರೆ. ಅಲ್ಲದೆ, ಈ ಮಾಫಿಯಾದ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದಾಗ ಮುಖ್ಯಮಂತ್ರಿಗಳಿಗೆ ಏಕವಚನ ಉಪಯೋಗಿಸಿ ಮಾತನಾಡಿದ್ದಾರೆ ಎಂದು ಆರೋಪಿಸಿದರು. ಹಾಗಾದರೆ ನಾವು ಕೂಡಾ ತಹಶೀಲ್ದಾರ್‌ರನ್ನು ಏಕವಚನದಲ್ಲಿ ಮಾತನಾಡಿಸಬಹುದೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. 

ಇದಕ್ಕೆ ಉತ್ತರಿಸಿದ ಸಭೆಯ ನೋಡಲ್ ಅಧಿಕಾರಿ ಶಿವಾನಂದ ಕಾಯ್ಕಿಣಿ, ಗ್ರಾಮಸಭೆಗಳಿಗೆ ತಹಶೀಲ್ದಾರ್ ಬರಲೇಬೇಕೆಂಬ ಕಡ್ಡಾಯವಿಲ್ಲ. ಅವರ ಪರವಾಗಿ ಗ್ರಾಮಕರಣಿಕರರು ಸಭೆಗೆ ಹಾಜರಾಗಿ ಮಾಹಿತಿ ನೀಡಬಹುದು ಎಂದು ತಿಳಿಸಿದ ಅವರು, ತಹಶೀಲ್ದಾರ್ ಬಗ್ಗೆ ತಮ್ಮಲ್ಲಿ ಆರೋಪಗಳಿದ್ದರೆ ಅದನ್ನು ಪಂಚಾಯತ್‌ಗೆ ಮತ್ತು ಮೇಲಧಿಕಾರಿಗಳ ಗಮನಕ್ಕೆ ತರುವಂತೆ ಸಲಹೆ ನೀಡಿದರು.

ನಿಡ್ಡೋಡಿ ಗ್ರಾಮದ ಬಾಪೂಜಿ ಶಾಲೆ ಬಳಿ ಇರುವ ಕೆರೆಯಲ್ಲಿ ಮಣ್ಣು ತುಂಬಿ ಮುಚ್ಚಿ ಹೋಗಿದೆ. ದರ ಹೂಳೆತ್ತಿದ್ದರೆ ಇಡೀ ನಿಡ್ಡೋಡಿ ಗ್ರಾಮದ ರೈತರಿಗೆ ನೀರಿನ ಅಭಾವ ಬಾರದು. ಆದರೆ ಹೂಳೆತ್ತುವ ಕಾರ್ಯಕ್ಕೆ ಇಲಾಖೆಗಳು ಮುಂದಾಗುತ್ತಿಲ್ಲ. ಕಳೆದ 15 ವರ್ಷಗಳ ಹಿಂದೆ ಜಿ.ಪಂ.ನ ಮಾಜಿ ಸದಸ್ಯ ಲಾಜರಸ್ ಡಿಕೋಸ್ತಾ ಇಲಾಖೆಗೆ ಮನವಿ ನೀಡಿದ್ದರು. ಆದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಪಂಚಾಯತ್ ಗಮನ ಹರಿಸಬೇಕಾಗಿದೆ ಎಂದು ಗ್ರಾಮಸ್ಥೆ ಶಾಂಭವಿ ತಿಳಿಸಿದರು. ಈ ಬಗ್ಗೆ ಜಿ.ಪಂ. ಉಪಾಧ್ಯಕ್ಷರು ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ಮಾತುಗಳು ಕೇಳಿ ಬಂದವು.

ಡೋರ್‌ನಂಬರ್, ಮನೆ ಅಂಗಡಿಗಳಿಗೆ ಅನುಮತಿ ಪತ್ರ ಪಡೆಯಲು ಕಾರ್ಮಿಕ ಇಲಾಖೆಗೆ ಎಷ್ಟು ಹಣವನ್ನು ಕೊಡಬೇಕು. ಪಂಚಾಯತ್‌ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಲೈಸನ್ಸ್ ನೀಡಲು ನಮ್ಮನ್ನು ಸ್ವಲ್ಪ ನೋಡಿಕೊಳ್ಳಬೇಕೆಂದು ಹೇಳುತ್ತಾರೆ. ಇದರ ಉದ್ದೇಶವೇನೆಂದು ಎಂದು ಗ್ರಾಮಸ್ಥರೊಬ್ಬರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ಉಗ್ಗಪ್ಪಮೂಲ್ಯ, ತಾನು ಹಾಗೆ ಹೇಳಿದ್ದಲ್ಲ, ತಾನು ಇಲ್ಲದಿದ್ದರೂ ಕಚೇರಿಯಲ್ಲಿರುವ ಸಿಬ್ಬಂದಿಯ ಜೊತೆ ಮಾತನಾಡಿ ಪಡೆದುಕೊಳ್ಳಿ ಎಂದು ಹೇಳಿರುವುದೆಂದು ಹಾರಿಕೆಯ ಉತ್ತರವನ್ನು ನೀಡಿದರು.

ಸರಕಾರವು ಕೊರಗ ಕುಟುಂಬಗಳಿಗೆ ನೀಡುವ ಮೊಟ್ಟೆ, ಅಕ್ಕಿ, ರಾಗಿ, ಕಡ್ಲೆ, ಬೆಲ್ಲ, ಹೆಸರು ಕಾಳು, ಸಕ್ಕರೆ ಸಹಿತ ಇತರ ಕೆಲವು ಪೌಷ್ಠಿಕ ಆಹಾರಗಳು ಅಂಗನವಾಡಿ ಕೇಂದ್ರಗಳಿಗೆ ಸರಬರಾಜಾಗುತ್ತಿದ್ದು ಇದನ್ನು ಕೊರಗ ಕುಟುಂಬಗಳು ತೆಗೆದುಕೊಂಡು ಹೋಗದೆ ಅಂಗನವಾಡಿ ಕೇಂದ್ರಗಳಲ್ಲಿ ಕೊಳೆಯುತ್ತಿವೆ. ಒತ್ತಾಯ ಮಾಡಿ ನೀಡಿದರು ಅದನ್ನು ಚೆಲ್ಲುವಂತಹ ಘಟನೆಗಳು ಕಂಡು ಬಂದಿವೆ ಎಂದು ಕಲ್ಲಮುಂಡ್ಕೂರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ವಿಜಯ ಪೈ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು.

ಈ ಸಮಸ್ಯೆಯು ಎಸ್‌ಸಿ ಎಸ್‌ಟಿ ಅಭಿವೃದ್ಧಿ ನಿಗಮಗಳಿಗೆ ಸಂಬಂಧಪಟ್ಟಿದ್ದು ಗ್ರಾಮಸಭೆಗೆ ಅವರು ಯಾರು ಬಾರದೆ ಇರುವುದರಿಂದ ಈ ಬಗ್ಗೆ ತಾನು ಇಲಾಖೆಯ ಅಧಿಕಾರಿಗಳಿಗೆ ತಿಳಿಸುವೆ ಎಂದು ಉತ್ತರಿಸಿದರು. ಕೆಂಪು ಕಲ್ಲಿನ ಕೋರೆ, ರಸ್ತೆ ಸಮಸ್ಯೆ, ಪಡಿತರ ವ್ಯವಸ್ಥೆಯ ಬಗ್ಗೆ, ಆಶಾ ಕಾರ್ಯಕರ್ತೆಯರ ಕೊರತೆ, ಅಣೆಕಟ್ಟುಗಳ ನಿರ್ವಹಣೆಯ ಬಗ್ಗೆ ಚರ್ಚೆ ನಡೆಯಿತು. ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.

ಗ್ರಾ.ಪಂ ಉಪಾಧ್ಯಕ್ಷ ಸುಂದರ, ಜಿ.ಪಂ ಸದಸ್ಯೆ ಕಸ್ತೂರಿ ಪಂಜ, ಗ್ರಾ.ಪಂ ಸದಸ್ಯರು, ಜಿ.ಪಂ ಇಂಜಿನಿಯರ್ ವಿಶ್ವನಾಥ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪುತ್ತಿಗೆ ವಲಯದ ಮೇಲ್ವಿಚಾರಕಿ ಭಾರತಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

10 ವರ್ಷಗಳ ಹಿಂದೆಯೇ ಅನುಮತಿ: ತಹಶೀಲ್ದಾರ್

10 ವರ್ಷಗಳ ಹಿಂದೆ ಗ್ರಾನೈಟ್ ಕಲ್ಲು ಉದ್ಯಮಕ್ಕೆ ಅನುಮತಿ ಪತ್ರವನ್ನು ನೀಡಲಾಗಿದೆ. ತಾನು ತಹಶೀಲ್ದಾರ್ ಆಗಿ ಮೂಡುಬಿದಿರೆಯಲ್ಲಿ ಅಧಿಕಾರ ಸ್ವೀಕರಿಸುವ ಮೊದಲೇ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ತನ್ನ ಮೇಲಿನ ಆರೋಪ ಸುಳ್ಳು. ಸಮಸ್ಯೆಯ ಬಗ್ಗೆ ತಿಳಿಯಲು 2 ಬಾರಿ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಅಲ್ಲಿ ಕಲ್ಲುಗಳನ್ನು ಸ್ಫೋಟ ಮಾಡುತ್ತಿಲ್ಲ. ಮನೆಗಳು ದೂರದಲ್ಲಿವೆ ಎಂದು ಮೂಡುಬಿದಿರೆ ತಹಶೀಲ್ದಾರ್ ಮುಹಮ್ಮದ್ ಇಸಾಕ್ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News