ಕೆದಂಬಾಡಿ: ಕೋಟಿ ವೃಕ್ಷ ಅಭಿಯಾನ, ವನಮಹೋತ್ಸವ
ಪುತ್ತೂರು, ಜು.8: ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾ.ಪಂ. ಮತ್ತು ಅರಣ್ಯ ಇಲಾಖೆಯ ವತಿಯಿಂದ ಕೆದಂಬಾಡಿ ಗ್ರಾಮದಲ್ಲಿ ಕೋಟಿ ವೃಕ್ಷ ಅಭಿಯಾನ ಕಾರ್ಯಕ್ರಮ ಶುಕ್ರವಾರ ನಡೆಯಿತು.
ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬರೂ ತಮ್ಮ ಮನೆ ಅಥವಾ ಜಾಗದಲ್ಲಿ ಎರಡು ಸಸಿಗಳನ್ನು ನೆಟ್ಟರೆ ಒಂದು ಗ್ರಾಮದಲ್ಲೇ ಸಾವಿರಾರು ಗಿಡಗಳನ್ನು ಬೆಳೆಸಬಹುದಾಗಿದೆ. ಗಿಡವನ್ನು ಬೆಳೆಸಲು ಪ್ರತಿಯೊಬ್ಬರೂ ಮನಸ್ಸು ಮಾಡಬೇಕು. ಮರ, ಗಿಡಗಳಿದ್ದರೆ ಮಾತ್ರ ಮುಂದಿನ ದಿನಗಳಲ್ಲಿ ನಮಗೆ ಬದುಕಲು ಸಾಧ್ಯ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಕೋಟಿ ವೃಕ್ಷ ಅಭಿಯಾನದ ಮೂಲಕ ಜಿಲ್ಲೆಯ ಪರಿಸರ ಹಚ್ಚ ಹಸಿರಿನಿಂದ ಕೂಡಿರಲು ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಕೆದಂಬಾಡಿ ಗ್ರಾ.ಪಂ. ಅಧ್ಯಕ್ಷ ಪ್ರವೀಣ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ವಲಯ ಅರಣ್ಯಾಧಿಕಾರಿ ಮನೋಹರ್, ಗ್ರಾ.ಪಂ. ಸದಸ್ಯರುಗಳಾದ ಕೃಷ್ಣಕುಮಾರ್ ರೈ, ವಿಜಯಕುಮಾರ್ ರೈ ಕೋರಂಗ, ಲಲಿತಾ, ಚಂದ್ರಾವತಿ, ರೇವತಿ , ಪಿಡಿಒ ಅಜಿತ್ ಜಿ.ಕೆ., ಕಾರ್ಯದರ್ಶಿ ಸುರೇಂದ್ರ ಕೆ. ಉಪಸ್ಥಿತರಿದ್ದರು.