ಬಂಟ್ವಾಳ: ‘ಗ್ರಾಮವಾಸ್ತವ್ಯ’ ಹೂಡಲಿದ್ದಾರೆ ಪೊಲೀಸರು
ಬಂಟ್ವಾಳ, ಜು. 8: ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ 11 ಗ್ರಾಮಗಳಿಗೆ ಸಂಬಂಧಿಸಿದಂತೆ ವಿವಿಧ ದೇವಸ್ಥಾನ -ದೈವಸ್ಥಾನ ಮತ್ತಿತರ ಧಾರ್ಮಿಕ ಕ್ಷೇತ್ರಗಳಲ್ಲಿ ಕಳ್ಳತನ ತಡೆಯುವ ನಿಟ್ಟಿನಲ್ಲಿ ಒಟ್ಟು ನಾಲ್ವರು ಪ್ರತ್ಯೇಕ ಪೊಲೀಸರನ್ನು ಗಸ್ತು ಪಡೆಗೆ ನಿಯೋಜಿಸಲಾಗಿದೆ. ಇವರು ಪ್ರತಿ ಗ್ರಾಮದಲ್ಲಿ ಸುತ್ತುವರಿದು ಅಲ್ಲೇ ’ಗ್ರಾಮ ವಾಸ್ತವ್ಯ’ ನಡೆಸಲಿದ್ದಾರೆ ಎಂದು ನಗರ ಠಾಣಾಧಿಕಾರಿ ನಂದ ಕುಮಾರ್ ಹೇಳಿದ್ದಾರೆ.
ತಾಲೂಕಿನ ಬಿ.ಸಿ.ರೋಡ್ ನಗರ ಪೊಲೀಸ್ ಠಾಣೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ವಿವಿಧ ದೇವಸ್ಥಾನ ಮತ್ತು ದೈವಸ್ಥಾನ ಆಡಳಿತ ಮಂಡಳಿ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಅವರು ಮಾತನಾಡಿದರು.
ಇಲ್ಲಿನ ನಾಲ್ವರು ಸಿಬ್ಬಂದಿಯಾದ ರಾಜೇಶ, ಉದಯ ಟ್, ಅದ್ರಾಮ, ಸುಜು ಇವರು ‘ಗ್ರಾಮ ವಾಸ್ತವ್ಯ’ ನಡೆಸುವರು ಎಂದು ತಿಳಿಸಿದರು.
ಧಾರ್ಮಿಕ ಕ್ಷೇತ್ರಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಿ, ಬೆಲೆ ಬಾಳುವ ಆಭರಣಗಳಿಗೆ ಪ್ರತ್ಯೇಕ ಲಾಕರ್ ವ್ಯವಸ್ಥೆ ಮತ್ತು ಪ್ರತಿ 10 ದಿನಕ್ಕೊಮ್ಮೆ ಕಾಣಿಕೆ ಡಬ್ಬಿ ಹಣ ತೆಗೆಯಬೇಕು. ಕಾವಲುಗಾರರ ನೇಮಕ ಮತ್ತು ಸರದಿಯಂತೆ ನಾಗರಿಕರು ಕಾವಲು ಕಾಯಲು ಪ್ರೇರೇಪಿಸುವುದರ ಜೊತೆಗೆ ಕ್ಷೇತ್ರದ ಕಿಟಕಿ, ಬಾಗಿಲು ಮತ್ತು ಛಾವಣಿ ಭದ್ರಗೊಳಿಸಬೇಕು ಎಂದು ಸಲಹೆ ನೀಡಿದರು.
ಪ್ರತಿ ಧಾರ್ಮಿಕ ಕ್ಷೇತ್ರಗಳ ಎದುರು ಆಡಳಿತ ಮಂಡಳಿ ಮುಖ್ಯಸ್ಥರ ಹೆಸರು ಮತ್ತು ಮೊಬೈಲ್ ಸಂಖ್ಯೆ ಜೊತೆಗೆ ಪೊಲೀಸ್ ಠಾಣೆ ಹೆಸರು ಮತ್ತು ದೂರವಾಣಿ ಸಂಖ್ಯೆ ಅಳವಡಿಸಬೇಕು ಎಂದರು.
ಕ್ರೈಂ ಎಸೈ ಗಂಗಾಧರಪ್ಪ, ಎಎಸೈ ಸಂಜೀವ ಕೆ., ಸೇಸಮ್ಮ, ಓಮನ ಎನ್.ಕೆ., ಪ್ರಮುಖರಾದ ಭುವನೇಶ ಶೆಟ್ಟಿ, ಜಯಶಂಕರ ಬಾಸ್ರಿತ್ತಾಯ, ಅಶೋಕ್ ಕುಮಾರ್ ಬರಿಮಾರು, ಜನಾರ್ದನ ಚೆಂಡ್ತಿಮಾರು, ಕ.ಕೃಷ್ಣಪ್ಪ, ವೆಂಕಪ್ಪ ಪೂಜಾರಿ, ಆರ್.ಚೆನ್ನಪ್ಪ ಕೋಟ್ಯಾನ್, ಶಶಿಧರ ಬ್ರಹ್ಮರಕೂಟ್ಲು, ಸದಾಶಿವ ಬಂಗೇರ, ವಿಶ್ವನಾಥ ಶೆಟ್ಟಿ, ಪುರುಷೋತ್ತಮ ಬಂಗೇರ ನಾಟಿ, ಎನ್.ರಮೇಶ ಶೆಣೈ, ಕೃಷ್ಣಪ್ಪ ಬಾಳ್ತಿಲ, ಕೆ.ನರಸಿಂಹ ಕಾಮತ್, ಶ್ರೀಧರ ಶೆಟ್ಟಿ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.
ಇದೇ ವೇಳೆ ಪ್ರತೀ ಗ್ರಾಮೀಣ ಅಂಗಡಿ ಮತ್ತು ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಇವರು ಪೊಲೀಸರನ್ನು ಆಗ್ರಹಿಸಿದರು.