ಹಿಂದೂ ಮಹಾ ಸಾಗರದಲ್ಲಿ ನಮ್ಮ ಸಬ್‌ಮರೀನ್‌ಗಳಿದ್ದರೆ ತಪ್ಪಿಲ್ಲ: ಚೀನಾ
ಬೀಜಿಂಗ್, ಜು. 8: ಹಿಂದೂ ಮಹಾ ಸಾಗರದಲ್ಲಿ ತನ್ನ ಸಬ್‌ಮರೀನ್‌ಗಳ ಚಲನವಲನಗಳು ‘‘ಕಾನೂನುಬದ್ಧ’’ವಾಗಿವೆ ಹಾಗೂ ‘‘ಅಂತಾರಾಷ್ಟ್ರೀಯ ರೀತಿನೀತಿಗಳಿಗೆ ಅನುಗುಣ’’ವಾಗಿವೆ ಎಂದು ಚೀನಾ ಇಂದು ಹೇಳಿದೆ. ಭಾರತೀಯ ನೌಕಾ ಹಡಗುಗಳು ನೌಕಾಯಾನ ಸ್ವಾತಂತ್ರದ ತತ್ವಗಳನ್ನು ಅನುಸರಿಸುವವರೆಗೆ ದಕ್ಷಿಣ ಚೀನಾ ಸಮುದ್ರದಲ್ಲಿ ಅವುಗಳ ಉಪಸ್ಥಿತಿಗೆ ತಾನೆಂದೂ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದಿದೆ.
‘‘ಚೀನಾದ ಸಬ್‌ಮರೀನ್‌ಗಳು ಸಮುದ್ರದ ಕೆಲವು ಪ್ರದೇಶಗಳನ್ನು ಹಾದುಹೋಗಿವೆ ಹಾಗೂ ಈ ಚಲನವಲನಗಳು ಕಾನೂನುಬದ್ಧವಾಗಿವೆ ಹಾಗೂ ಅಂತಾರಾಷ್ಟ್ರೀಯ ರಿವಾಜುಗಳಿಗೆ ಅನುಗುಣವಾಗಿವೆ’’ ಎಂದು ಚೀನಾದ ರಕ್ಷಣಾ ಸಚಿವಾಲಯದ ವಕ್ತಾರರೊಬ್ಬರು ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವೇಳೆ ಹೇಳಿದರು.
ಹಿಂದೂ ಮಹಾಸಾಗರದಲ್ಲಿ ಚೀನಾದ ಸಬ್‌ಮರೀನ್‌ಗಳ ಚಲನವಲನಗಳು ಭಾರತದ ಕಳವಳಕ್ಕೆ ಕಾರಣವಾಗಿವೆ ಎಂಬ ಕುರಿತ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.
ಹಿಂದೂ ಮಹಾ ಸಾಗರದಲ್ಲಿ ಚೀನಾದ ಸಬ್‌ಮರೀನ್‌ಗಳ ಚಲನವಲನಗಳು ಕಾನೂನುಬದ್ಧವಾದರೆ, ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತೀಯ ನೌಕೆಗಳ ಉಪಸ್ಥಿತಿ ತಪ್ಪು ಎಂದು ಚೀನಾ ಯಾಕೆ ಹೇಳುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ವಕ್ತಾರ, ಚೀನಾ ಇಂಥ ನಿಲುವನ್ನು ಯಾವತ್ತೂ ತೆಗೆದುಕೊಂಡಿಲ್ಲ ಎಂದುತ್ತರಿಸಿದರು.
‘‘ಒಂದು ವಿಷಯವನ್ನು ಸ್ಪಷ್ಟ ಪಡಿಸಲು ನಾನು ಇಚ್ಛಿಸುತ್ತೇನೆ. ಭಾರತೀಯ ಹಡಗುಗಳು ದಕ್ಷಿಣ ಚೀನಾ ಸಮುದ್ರವನ್ನು ಪ್ರವೇಶಿಸಿದಾಗ, ಅದು ತಪ್ಪು ಎಂದು ನಾವು ಹೇಳುತ್ತೇವೆ ಎಂದು ನೀವು ಹೇಳಿದಿರಿ. ನಾವು ಹಾಗೆ ಹೇಳುವುದನ್ನು ನೀವು ಎಲ್ಲಿ ಕೇಳಿದಿರಿ? ನಾನು ರಕ್ಷಣಾ ಸಚಿವಾಲಯದವನು. ನಾನು ಹಾಗೆ ಯಾವತ್ತೂ ಹೇಳಿಲ್ಲ’’ ಎಂದರು.