ಉಡುಪಿ: ಕೇರಳದ ಬಾಸ್ಕೆಟ್‌ಬಾಲ್ ಆಟಗಾರ್ತಿಯರಿಗೆ ಗಾಯವಾಗದಂತೆ ತಡೆಯುವ ತರಬೇತಿ

Update: 2016-07-08 17:33 GMT

ಮಣಿಪಾಲ, ಜು.8: ಕೇರಳ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ಮಹಿಳಾ ಬಾಸ್ಕೆಟ್‌ಬಾಲ್ ತಂಡದ 10 ಮಂದಿ ಆಟಗಾರ್ತಿಯರಲ್ಲಿ ಏಳು ಮಂದಿ ಆಟಗಾರ್ತಿಯರು ಇದೀಗ ಕಳೆದ ಮೂರು ದಿನಗಳಿಂದ ಮಣಿಪಾಲದಲ್ಲಿ ಆಟದ ವೇಳೆ ಗಾಯಗೊಳ್ಳದಂತೆ ತಡೆಯುವ ವೈಜ್ಞಾನಿಕ ವಿಧಾನ ಹಾಗೂ ಪ್ರದರ್ಶನದ ಮಟ್ಟವನ್ನು ಮೇಲ್ಪಟ್ಟಕ್ಕೇರಿಸುವ ಕುರಿತು ವಿಶೇಷ ತರಬೇತಿಯನ್ನು ಪಡೆಯುತ್ತಿದ್ದಾರೆ.

ಮಣಿಪಾಲ ವಿವಿಯ ಒಳಾಂಗಣ ಕ್ರೀಡಾ ಸಂಕೀಣ ‘ಮರೀನಾ’ದಲ್ಲಿ ನೂತನವಾಗಿ ಕಾರ್ಯಾಚರಿಸುತ್ತಿರುವ ಅತ್ಯಾಧುನಿಕ, ಸುಸಜ್ಜಿತ ಕ್ರೀಡಾವಿಜ್ಞಾನ ವೈದ್ಯಕೀಯ ಪ್ರಯೋಗಾಲಯ (ಸ್ಪೋರ್ಟ್ಸ್ ಸಾಯನ್ಸ್ ಮೆಡಿಸಿನ್ ಲ್ಯಾಬ್)ದಲ್ಲಿ ಕೇರಳದ ಮಹಿಳಾ ಬಾಸ್ಕೆಟ್‌ಬಾಲ್ ಆಟಗಾರ್ತಿಯರು ಈ ತರಬೇತಿ ಪಡೆಯುತಿದ್ದಾರೆ.

‘ಇದು ನಮ್ಮ ವಿಭಾಗಕ್ಕೆ ದೊರಕಿದ ಮೊದಲ ಅವಕಾಶವಾಗಿದೆ. ಈ ಸೌಲಭ್ಯಗಳನ್ನು ರಾಜ್ಯಮಟ್ಟದ ಹಾಗೂ ರಾಷ್ಟ್ರೀಯ ಮಟ್ಟದ ಆಟಗಾರರು ಬಳಸಿಕೊಳ್ಳಲು ಅವಕಾಶಗಳಿವೆ. ಕ್ರೀಡಾಪಟುವೊಬ್ಬ ತನ್ನ ಕ್ರೀಡಾಕ್ಷಮತೆಯ ವೇಗ, ಬಲ, ದೀರ್ಘಕಾಲ ಕ್ರೀಡಾ ಸಾಮರ್ಥ್ಯವನ್ನು ಉಳಿಸಿಕೊಳ್ಳುವ ವಿದಾನದ ಕುರಿತು ಇಲ್ಲಿ ತರಬೇತಿ ಪಡೆಯಬಹುದು.’ ಎಂದು ಮಣಿಪಾಲದ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸಾಯನ್ಸ್‌ನ ಎಕ್ಸಸೈಸ್ ಎಂಡ್ ಸ್ಪೋರ್ಟ್ಸ್ ಸಾಯನ್ಸ್ ವಿಭಾಗ ಮುಖ್ಯಸ್ಥ ಹಾಗೂ ಸಹಾಯಕ ಪ್ರೊಫೆಸರ್ ಆಗಿರುವ ಡಾ.ಫಿಡ್ಡಿ ಡೇವಿಸ್ ತಿಳಿಸಿದರು.

ತಿರುವನಂತಪುರಂ ಮೂಲದ ಕೇರಳ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ (ಕೆಎಸ್‌ಇಬಿ)ಯ ಮೂವರು ಆಟಗಾರ್ತಿಯರಾದ ಸ್ಟೇಫಿ ನಿಕ್ಸನ್, ಜೀನಾ ಹಾಗೂ ಅಂಜನಾ ಅವರು ಈ ದೇಶವನ್ನು ಪ್ರತಿನಿಧಿಸಿ ಆಡುತ್ತಿದ್ದು, ಉಳಿದವರೆಲ್ಲರೂ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕೆಎಸ್‌ಇಬಿ ಈ ವರ್ಷದ ಅಖಿಲ ಭಾರತ ಮಟ್ಟದ ನಾಲ್ಕು ಟೂರ್ನಿಗಳನ್ನು ಜಯಿಸಿದ್ದು, ಎರಡರಲ್ಲಿ ರನ್ನರ್ ಅಪ್ ಆಗಿದೆ.

ನಾವು ಮೊದಲು ಎಲ್ಲಾ ಆಟಗಾರರ ಮೂಲಭೂತ ಸಾಮರ್ಥ್ಯವನ್ನು ಅಳೆಯುತ್ತೇವೆ. ಅದರ ಆಧಾರದಲ್ಲಿ ನಮ್ಮ ಸಹೋದ್ಯೋಗಿಗಳು ಇಡೀ ತಂಡದ ಆರು ತಿಂಗಳ ತರಬೇತಿ ಕಾರ್ಯಸೂಚಿಯನ್ನು ತಯಾರಿಸುತ್ತದೆ ಎಂದ ಡಾ.ಫಿಡ್ಡಿ, ನನ್ನ ವಿಭಾಗವನ್ನು 2014ರಲ್ಲಿ ಆರಂಭಿಸಲಾಗಿದ್ದು, ಇತ್ತೀಚಿಗಷ್ಟೇ ನಾವು ಈ ಪ್ರಯೋಗಾಲಯವನ್ನು ಪ್ರಾರಂಭಿಸಿದ್ದೇವೆ ಎಂದರು.

ನಾವು ಈ ಕ್ರೀಡಾ ಪ್ರಯೋಗಾಲಯವನ್ನು ಇನ್ನಷ್ಟು ವಿಸ್ತರಿಸುವ ಯೋಜನೆಯನ್ನು ಹೊಂದಿದ್ದು, ಇದನ್ನು ದೇಶದ ಅತ್ಯುತ್ತಮ ಕ್ರೀಡಾ ವಿಜ್ಞಾನ ಕೇಂದ್ರವಾಗಿ ರೂಪಿಸುವ ಗುರಿಯನ್ನು ಹಾಕಿಕೊಂಡಿದ್ದೇವೆ ಎಂದು ಡಾ.ಫಿಡ್ಡಿ ತಿಳಿಸಿದರು.

ಮಣಿಪಾಲ ವಿವಿಯ ಈ ಕ್ರೀಡಾ ಪ್ರಯೋಗಾಲಯದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಪ್ರಶಂಸಿಸಿದ ಕೆಎಸ್‌ಇಬಿ ಕೋಚ್ ಅಜು ಜಾಕೋಬ್, ಇಂಥ ಸೌಲಭ್ಯವನ್ನು ದೇಶದ ಯಾವುದೇ ಭಾಗದಲ್ಲಿ ನಾನು ನೋಡಿಲ್ಲ. ಟೂರ್ನಿಯೊಂದರಲ್ಲಿ ಭಾಗವಹಿಸಿದ್ದಾಗ ಈ ಕೇಂದ್ರದ ಕುರಿತು ನನಗೆ ಮಾಹಿತಿ ದೊರಕಿತು. ಹೀಗಾಗಿ ಇಲ್ಲಿಗೆ ನನ್ನ ತಂಡದ ಆಟಗಾರ್ತಿಯರನ್ನು ಕರೆತರಲು ನಿರ್ಧರಿಸಿದೆ ಎಂದರು.

ಇಲ್ಲಿನ ತಜ್ಞರು ಪ್ರತಿ ಆಟಗಾರರ ಮೂಲಸಾಮರ್ಥ್ಯವನ್ನು ಅಂದಾಜಿಸಿದ ಬಳಿಕ ನೀಡುವ ವಿವಿಧ ತರಬೇತಿಯಿಂದ ಅವರ ಪ್ರದರ್ಶನದ ಮಟ್ಟ ಖಂಡಿತ ಹೆಚ್ಚುವುದು ಎಂಬ ವಿಶ್ವಾಸ ತನಗಿದೆ ಎಂದು ಅಜು ಜಾಕೋಬ್ ತಿಳಿಸಿದರು.

ಗುರುವಾರ ತಂಡದ ಆಟಗಾರ್ತಿಯರ ತರಬೇತಿಯ ಮೊದಲ ದಿನ ಎಲ್ಲರ ವೈದ್ಯಕೀಯ ಪರೀಕ್ಷೆಗಳು, ಇದುವರೆಗೆ ಅವರ ಗಾಯದ ವಿವಿದ ಪ್ರಕಾರಗಳ ಕುರಿತು ಮಾಹಿತಿಗಳನ್ನು ಸಂಗ್ರಹಿಸಲಾಯಿತು. ಬಳಿಕ ಬಾಸ್ಕೆಟ್‌ಬಾಲ್ ಆಟಕ್ಕೆ ಸಂಬಂಧಿಸಿದಂತೆ ಅವರ ವೇಗ ಹಾಗೂ ಕ್ಷಮತೆಯ ಪರೀಕ್ಷೆ ನಡೆಸಲಾಯಿತು. ಅನಂತರ ಮರಿನಾದ ಸುಸಜ್ಜಿತ ಜಿಮ್ನಾಸಿಯಂನಲ್ಲಿ ಅವರೆಲ್ಲರ ಗರಿಷ್ಠ ಶಕ್ತಿ ಸಾಮರ್ಥ್ಯದ ಪರೀಕ್ಷೆ ನಡೆಯಿತು. ಆಬಳಿಕ ಪ್ರಯೋಗಾಲಯದಲ್ಲಿ ಅವರ ಪ್ರದರ್ಶನ ಸಾಮರ್ಥ್ಯದ ಪರೀಕ್ಷೆ ನಡೆಯಿತು.

ಬಾಸ್ಕೆಟ್‌ಬಾಲ್ ಆಟದಲ್ಲಿ ಕ್ರೀಡಾಪಟುವಿನ ಗಾಳಿಯಲ್ಲಿ ನೆಗೆಯುವ ಸಾಮರ್ಥ್ಯವು ಪ್ರಮುಖವಾದುದರಿಂದ ಅದಕ್ಕಾಗಿ ವಿವಿಧ ವ್ಯಾಯಾಮಗಳನ್ನು ಮಾಡಿಸಲಾಯಿತು. ಆಮ್ಲಜನಕವನ್ನು ಅವರು ಬಳಸುವ ಗರಿಷ್ಠ ಪ್ರಮಾಣವನ್ನು ಅಂದಾಜಿಸಲಾಯಿತು. ಇದರೊಂದಿಗೆ ಗಾಯಗೊಳ್ಳುವ ಸಾಧ್ಯತೆಯನ್ನು ಕಡಿಮೆಗೊಳಿಸಲು ನೆಗೆಯುವ, ಸುರಕ್ಷಿತವಾಗಿ ನೆಲವನ್ನು ಮುಟ್ಟುವ ಕೆಲ ಅಂಶಗಳ ಕುರಿತು ತಿಳಿಸಲಾಯಿತು. ಇದರೊಂದಿಗೆ ವೇಗದ ಚಲನೆಯ ವಿಧಾನವನ್ನು, ಅದರ ವಿಶ್ಲೇಷಣೆಯನ್ನು ಸಾಪ್ಟ್‌ವೇರ್ ಮೂಲಕ ತಿಳಿಸಲಾಯಿತು.

ತರಬೇತಿಯ ವೇಳೆ ಪಂದ್ಯದ ವೇಳೆಯಲ್ಲಿ ಆಟಗಾರರು ಗಾಯಗೊಳ್ಳುವ ಸಾಧ್ಯತೆಯನ್ನು ಕನಿಷ್ಠಗೊಳಿಸಲು ಬೇಕಾದ ಮಾಹಿತಿಗಳನ್ನು ತಿಳಿಸಲಾಗುವುದು ಎಂದು ಡಾ. ಫಿಡ್ಡಿ ತಿಳಿಸಿದ್ದಾರೆ. ಕೆಎಸ್‌ಇಬಿ ತಂಡದ ಸ್ಟೇಫಿ ನಿಕ್ಸನ್, ರಾಜಮೋಳ್, ಶಿಲ್ಜಿ ಜೋರ್ಜ್, ಜೀನಾ ಪಿ.ಎಸ್., ಅಂಜನಾ ಪಿ.ಜಿ., ಪ್ರಾಮಿ ಪಿ.ಲಾಲ್, ಅಮೃತಾ, ಶ್ರೀದೇವಿ ಪಿ.ಆರ್.(ಮ್ಯಾನೇಜರ್) ಮತ್ತು ಅಜಿ ಜಾಕೋಬ್ (ಕೋಚ್) ಇಲ್ಲಿ ತರಬೇತಿಯಲ್ಲಿ ಭಾಗವಹಿಸಿದ್ದಾರೆ. ಅನಾರೋಗ್ಯದ ಕಾರಣ ಮೂವರು ಇಲ್ಲಿಗೆ ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News