ಪೇಜಾವರ ಶ್ರೀಗಳಿಂದ ಭರತರಾಜ್‌ಗೆ ಸನ್ಯಾಸ ದೀಕ್ಷೆ
ಉಡುಪಿ, ಜು.8: ಸಮಾಜದ ಕೆಲವು ಹಿರಿಯರ ಆಗ್ರಹದಂತೆ ಸಮಸ್ತ ಕ್ಷತ್ರೀಯ ವಂಶಕ್ಕೆ ಸಂಬಂಧಿಸಿದ ಮಠವೊಂದನ್ನು ಸ್ಥಾಪಿಸಿ ಅದಕ್ಕೊಂದು ಸ್ವಾಮೀಜಿಯವರನ್ನು ನಿಯೋಜಿಸಲು ತೀರ್ಮಾನಿಸಿರುವುದಾಗಿ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶ್ವತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಚಕ್ರವರ್ತಿಗಳಲ್ಲಿ ನಿಯಾಮಕನಾಗಿರುವ ಭಗವಂತನ ರಾಜರಾಜೇಶ್ವರ ಎಂಬ ರೂಪದ ಹೆಸರಿನ ‘ಶ್ರೀರಾಜರಾಜೇಶ್ವರ ಸಂಸ್ಥಾನ’ ಎಂದು ಸ್ಥಾಪಿತವಾಗಲಿರುವ ಈ ಮಠಕ್ಕೆ ಸದಾಚಾರ ಸಂಪನ್ನರೂ, ಅಧ್ಯಯನಶೀಲರೂ, ಉತ್ಸಾಹಿ ಯುವಕರೂ ಆದ ಭರತರಾಜೇ ಅರಸ ಇವರನ್ನು ನೂತನ ಯತಿಗಳನ್ನಾಗಿ ನಿಯೋಜಿಸಲಾಗುವುದು ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.
ಮಂಗಳೂರಿನ ಹೇಮರಾಜೇ ಅರಸ್ ಹಾಗೂ ಎಸ್.ಪಿ.ಜ್ಯೋತಿ ದಂಪತಿಗಳ ಪುತ್ರರಾದ ಭರತರಾಜೇ ಅರಸ್ ಈಗಾಗಲೇ ಅನೇಕ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು, ಧರ್ಮಪ್ರಸಾರದ ಬಗ್ಗೆ ಅಭಿರುಚಿಯನ್ನು, ಸಾಮರ್ಥ್ಯವನ್ನೂ ಹಾಗೂ ಶಾಸ್ತ್ರಜ್ಞಾನವನ್ನು ಹೊಂದಿದ್ದಾರೆ. ಅವರು ಸನ್ಯಾಸ ಧರ್ಮದಲ್ಲಿದ್ದು, ವೈದಿಕ ಧರ್ಮವನ್ನು ಭಗವದ್ಭಕ್ತಿಯನ್ನು ಪ್ರಸಾರಿಸಲು ಸಮ್ಮತಿಸೂಚಿಸಿದ್ದು, ಇದಕ್ಕೆ ಆತನ ಹೆತ್ತವರ ಹಾಗೂ ಬಂಧುಗಳ ಸಮ್ಮತಿಯೂ ಇದೆ ಎಂದವರು ತಿಳಿಸಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಜು.11ರ ಸೋಮವಾರ ‘ಸಂನ್ಯಾಸ ಸ್ವೀಕಾರ ಮತ್ತು ಪೀಠ ಪ್ರತಿಷ್ಠೆ’ ಸಮಾರಂಭ ನಡೆಯಲಿದೆ. ಇದರಲ್ಲಿ ಶ್ರೀರಾಜ ರಾಜೇಶ್ವರ ಸಂಸ್ಥಾನವೆಂಬ ಕ್ಷತ್ರಿಯ ಪೀಠಕ್ಕೆ ಅವರನ್ನು ಪೀಠಾಧಿಪತಿಯಾಗಿ ನಿಯೋಜಿಸಲಾಗುವುದು ಎಂದವರು ಹೇಳಿದ್ದಾರೆ. ಜು.11ರ ಮುಂಜಾನೆ ಇದರ ವಿಧಿವಿದಾನಗಳು ಆರಂಭಗೊಂಡು 7:00ಗಂಟೆಗೆ ಸಂನ್ಯಾಸ ದೀಕ್ಷೆ ನೀಡಲಾಗುವುದು ಹಾಗೂ ನಾಮಕರಣ ನಡೆಯಲಿದೆ. ಸಂಜೆ ಸಾರ್ವಜನಿಕ ಸಭೆ ರಾಜಾಂಗಣದಲ್ಲಿ ನಡೆಯಲಿದೆ.
ಪರಿಚಯ
ಕ್ಷತ್ರಿಯ ಪೀಠಕ್ಕೆ ಪ್ರಥಮ ಪೀಠಾಧಿಪತಿಯಾಗಿ ನಿಯೋಜನೆ ಗೊಳ್ಳುವ ಭರತರಾಜೇ ಅರಸ್ 34ರ ಹರೆಯದ ಇ ಎಂಡ್‌ಸಿ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಭಾರತೀಯ ಸಂಸ್ಕೃತಿ, ಧಾರ್ಮಿಕ ವಿಷಯದಲ್ಲಿ ಸಾಕಷ್ಟು ಜ್ಞಾನವನ್ನು ಹೊಂದಿದ್ದಾರೆ.
ಮೂಲತ: ಚಿಕ್ಕಮಗಳೂರಿನವರಾದ ಭರತರಾಜೇ ಅರಸ್ 1982ರಲ್ಲಿ ಮಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಹೇಮರಾಜೇ ಅರಸ್ ಮಂಗಳೂರು ಎಂಸಿಎಫ್‌ನಲ್ಲಿ ಉದ್ಯೋಗಿಯಾಗಿದ್ದರೆ, ತಾಯಿ ಜ್ಯೋತಿ ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ. ಇವರ ತಮ್ಮ ಪ್ರಿಯದರ್ಶನರಾಜೇ ಅರಸ್ ಸಹ ಎಂಸಿಎಫ್‌ನಲ್ಲಿ ಉದ್ಯೋಗಿ. ಇವರ ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ಶಿಕ್ಷಣ ಮಂಗಳೂರಿನ ಸೈಂಟ್ ಅಲಾಸಿಯಸ್ ಪ.ಪೂ.ಕಾಲೇಜಿನಲ್ಲಿ. ಬಳಿಕ ಮಣಿಪಾಲದ ಎಂಐಟಿಯಲ್ಲಿ ಇಂಜಿನಿಯರಿಂಗ್ ಶಿಕ್ಷಣ. ಮಥುರಾ ಗೋವರ್ಧನದಲ್ಲಿ ಶ್ರೀಮದ್ ಭಾಗವತ ವಿದ್ಯಾಪೀಠದಲ್ಲಿ ಶಾಸ್ತ್ರಾಧ್ಯಯನ ನಡೆಸಿದ ಇವರು ಇಸ್ಕಾನ್‌ನಲ್ಲಿ ಎಂಟು ವರ್ಷ ಸೇವೆ ಸಲ್ಲಿಸಿದ್ದಾರೆ.
ಗೋಸಂರಕ್ಷಣೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಇದೀಗ ಉಡುಪಿಯಲ್ಲಿ ಶಾಸ್ತ್ರಾಧ್ಯಯನ ನಡೆಸುತ್ತಿರುವ ಅವಿವಾಹಿತ ಭರತರಾಜೇ ಅರಸ್, ಜು.11ರಂದು ಪೇಜಾವರ ಶ್ರೀಗಳಿಂದ ಸನ್ಯಾಸದೀಕ್ಷೆ ಪಡೆಯಲಿದ್ದು ಬಳಿಕ ಕ್ಷತ್ರಿಯ ಪೀಠವನ್ನೇರಲಿದ್ದಾರೆ.