ಪಾಕಿಸ್ತಾನದ ‘ಮದರ್ ಥೆರೆಸಾ’ ಖ್ಯಾತಿಯ ಅಬ್ದುಲ್ ಸತ್ತಾರ್ ಈಧಿ ಇನ್ನಿಲ್ಲ

Update: 2016-07-09 07:26 GMT

ಕರಾಚಿ, ಜು.9: ಪಾಕಿಸ್ತಾನದ ಅತಿ ದೊಡ್ಡ ಸಮಾಜ ಸೇವಾ ಸಂಸ್ಥೆ ಈಧಿ ಫೌಂಡೇಶನ್ ಸ್ಥಾಪಕ ಅಬ್ದುಲ್ ಸತ್ತಾರ್ ಈಧಿ ಶುಕ್ರವಾರ ನಿಧನ ಹೊಂದಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಕಿಡ್ನಿ ವೈಫಲ್ಯಕ್ಕೆ ತುತ್ತಾಗಿದ್ದ ಸತ್ತಾರ್ ಕರಾಚಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ಅಪರಾಹ್ನ ಸಿಂಧ್ ಇನ್‌ಸ್ಟಿಟ್ಯೂಟ್ ಆಫ್ ಯುರಾಲಜಿ ಆ್ಯಂಡ್ ಟ್ರಾನ್ಸ್ ಪ್ಲಾಂಟೇಶನ್ ನಲ್ಲಿ ಡಯಾಲಿಸಿಸ್‌ಗೆ ಒಳಗಾದ ಸಂದರ್ಭ ಅವರ ಸ್ಥಿತಿ ವಿಷಮಿಸಿ ಕೊನೆಯುಸಿರೆಳೆದರು.

ಪಾಕಿಸ್ತಾನದ ಮದರ್ ತೆರೆಸಾ ಎಂದೇ ಅವರು ಖ್ಯಾತರಾಗಿದ್ದರಲ್ಲದೆ ತಮ್ಮ ಸಂಸ್ಥೆಯ ಮುಖಾಂತರ ಹಲವಾರು ಅನಾಥಾಶ್ರಮಗಳು, ವೃದ್ಧಾಶ್ರಮಗಳು, ಅನಾಥ ಮಹಿಳೆಯರ ಆಶ್ರಮಗಳು, ಡಿಸ್ಪೆನ್ಸರಿ ಹಾಗೂ ಶವಾಗಾರಗಳನ್ನು ನಿರ್ಮಿಸುವಲ್ಲಿ ಶ್ರಮಿಸಿದ್ದರು. ಅವರ ಸಂಘಟನೆ 1,500 ಅಂಬ್ಯುಲೆನ್ಸ್ ಗಳನ್ನೂ ಹೊಂದಿದ್ದು, ಎಲ್ಲೇ ಉಗ್ರ ದಾಳಿ ಅಥವಾ ಯಾವುದೇ ಅಪಘಾತವಾದರೂ ಅಲ್ಲಿಗೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದವು.

ಅವರ ಹೆಸರು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಹಲವಾರು ಬಾರಿ ಶಿಫಾರಸು ಗೊಂಡಿದ್ದರೂ ಆ ಪ್ರಶಸ್ತಿ ಜೀವಿತಾವಧಿಯಲ್ಲಿ ಅವರಿಗೆ ದಕ್ಕಿರಲಿಲ್ಲ.
ಗುಜರಾತ್‌ನಲ್ಲಿರುವ ಬಂಟ್ವಾ ಗ್ರಾಮದಲ್ಲಿ 1928ರಲ್ಲಿ ಹುಟ್ಟಿದ ಈಧಿಯವರಿಗೆ 1986ರಲ್ಲಿ ಸಾರ್ವಜನಿಕ ಸೇವೆಗಾಗಿ ರಾಮೋನ್ ಮ್ಯಾಗ್ಸೇಸೆ ಪ್ರಶಸ್ತಿ ಕೂಡ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News