ಅಮಾಯಕರ ಕೊಲೆ, ವಿನಾಶ ಹಾಗೂ ಅಶಾಂತಿ ಹರಡುವುದು ಅತಿ ದೊಡ್ಡ ಪಾಪ

Update: 2016-07-09 10:29 GMT

ಮಕ್ಕಾ/ಮದೀನಾ, ಜು.9: ಅಮಾಯಕರ ಕೊಲೆ, ವಿನಾಶ ಹಾಗೂ ಅಶಾಂತಿ ಹರಡುವುದು ವ್ಯಕ್ತಿಯೊಬ್ಬ ಮಾಡಬಹುದಾದ ಅತಿ ದೊಡ್ಡ ಪಾಪವಾಗಿದೆ ಎಂದು ಮಕ್ಕಾದ ಪವಿತ್ರ ಮಸೀದಿಯ ಇಮಾಮ್ ಹಾಗೂ ಖತೀಬರಾದ ಶೇಖ್ ಖಾಲಿದ್ ಬಿನ್ ಅಲಿ ಅಲ್-ಘಮ್ದಿ ತಿಳಿಸಿದ್ದಾರೆ.

ಅಪರಾಧಿಗಳ ತಂಡ, ಪಂಥೀಯ ಉಗ್ರ ಸಂಘಟನೆಗಳು ಹಾಗೂ ವೈರಿಗಳು ಉಗ್ರ ಚಟುವಟಿಕೆಗಳ ಹಿಂದಿದ್ದಾರೆ ಎಂದು ತಮ್ಮ ಶುಕ್ರವಾರದ ಸಂದೇಶದಲ್ಲಿ ಅವರು ತಿಳಿಸಿದ್ದಾರೆ.

‘‘ರಮಝಾನ್ ತಿಂಗಳ ಕೊನೆಯ ಹತ್ತು ದಿನಗಳಲ್ಲಿ ಈ ಪವಿತ್ರ ನಾಡಿನಲ್ಲಿ ನಡೆದ ಘಟನೆಗಳು ಈ ಎರಡು ಪವಿತ್ರ ಮಸೀದಿಗಳನ್ನು ಪ್ರೀತಿಸುವವರ ಹಾಗೂ ಮುಸ್ಲಿಮರ ಪಾಲಿನ ದುರಂತವಾಗಿದೆ ಎಂದು ಅವರು ಹೇಳಿದ್ದಾರೆ. ದಾಳಿಕೋರರು ಎಲ್ಲಿಂದ ಬಂದರೆಂಬ ಬಗ್ಗೆ ಜನರಿಗೆ ಆಶ್ಚರ್ಯವಾಗುತ್ತಿದೆಯೆಂದು ಹೇಳಿದ ಅವರು ಇಂತಹ ಉಗ್ರ ಕೃತ್ಯಗಳು ಈ ಪವಿತ್ರ ಸ್ಥಳಗಳಿಗೆ ಪರಕೀಯವಾಗಿದೆಯೆಂದು ವಿವರಿಸಿದ್ದಾರೆ. ಇಂತಹ ಉಗ್ರ ಕೃತ್ಯಗಳ ವಿರುದ್ಧ ಮುಸ್ಲಿಮರು ಒಂದಾಗಿ ನಿಲ್ಲಬೇಕೆಂದು ಅವರು ಮುಸ್ಲಿಮರಿಗೆ ಕರೆ ನೀಡಿದರು.

ಪ್ರವಾದಿಯವರ ಮಸೀದಿಯ ಇಮಾಮ್ ಹಾಗೂ ಖತೀಬರಾದ ಶೇಖ್ ಹುಸೇನ್ ಅಲ್- ಶೇಖ್ ಮಾತನಾಡುತ್ತಾ, ಇಸ್ಲಾಂ ಧರ್ಮದ ಸಿದ್ಧಾಂತಗಳಿಂದ ದೂರ ಸರಿದಿರುವ ಕೆಲ ಮಂದಿ ಇಂತಹ ಕೃತ್ಯಗಳಿಗಿಳಿದಿದ್ದಾರೆಂದು ಹೇಳಿದರು. ಧರ್ಮದ ವೈರಿಗಳು ಹಾಗೂ ಅಲ್ಲಾಹನ ಮೇಲೆ ಭಯವಿಲ್ಲದ ಮಂದಿ ಈ ಕೃತ್ಯವನ್ನೆಸಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.

‘‘ಇಸ್ಲಾಂ ವಿರೋಧಿಗಳು ಮುಸ್ಲಿಮರ ನಡುವೆ ವಿಭಜನೆಯ ಬೀಜ ಬಿತ್ತಲು ಯತ್ನಿಸುತ್ತಿದ್ದಾರೆ’’ ಎಂದು ಆಪಾದಿಸಿದ ಅವರು ವದಂತಿಗಳನ್ನು ಹಾಗೂ ಸುಳ್ಳು ಸುದ್ದಿಗಳನ್ನು ನಂಬದಂತೆ ಮುಸ್ಲಿಮರಿಗೆ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News