ನರೇಗಾದಡಿ ಗ್ರಾ.ಪಂ.ಗಳಲ್ಲಿ ನರ್ಸರಿ ರಚನೆಗೆ ಸಚಿವ ರೈ ಸಲಹೆ

Update: 2016-07-09 09:39 GMT

ಮಂಗಳೂರು, ಜು.9: ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್‌ಗಳಲ್ಲೂ ಕನಿಷ್ಠ 2 ಸಾವಿರದಿಂದ 5 ಸಾವಿರ ಗಿಡಗಳ ನರ್ಸರಿಯನ್ನು ಮಾಡುವ ಕಾರ್ಯವನ್ನು ಜಿಲ್ಲಾ ಪಂಚಾಯತ್ ನಿರ್ವಹಿಸಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಲಹೆ ನೀಡಿದರು.

ಅರಣ್ಯ ಇಲಾಖೆ ಮಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವ - 2016 ಕೋಟಿ ವೃಕ್ಷ ಆಂದೋಲನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಪರಿಸರ ಹಾಗೂ ಗಿಡಗಳ ಮಹತ್ವದ ಬಗ್ಗೆ ಮಾಹಿತಿ ನೀಡಿ ಗಿಡಗಳನ್ನ ನೆಡಲು ಪ್ರೇರೇಪಿಸುವ ದೃಷ್ಟಿಯಿಂದ ಕೋಟಿ ವೃಕ್ಷ ಕಾರ್ಯಕ್ರಮವನ್ನು ರಾಜ್ಯ ಸರಕಾರ ಹಮ್ಮಿಕೊಂಡಿದ್ದು, ಮುಂದಿನ ವರ್ಷ ಪ್ರತಿ ಜಿಲ್ಲೆಗಳಲ್ಲಿ ಕನಿಷ್ಠ 25 ಲಕ್ಷ ಸಸಿಗಳನ್ನು ಸಿದ್ಧಪಡಿಸುವ ಕಾರ್ಯ ನಡೆಯಬೇಕು ಎಂದವರು ಹೇಳಿದರು.

ರಾಜ್ಯದಲ್ಲಿ 8 ಕೋಟಿ ವೃಕ್ಷ ಗಿಡ ನೆಡುವ ಕಾರ್ಯಕ್ರಮದ ಅಂಗವಾಗಿ ಇಂದು ದ.ಕ. ಜಿಲ್ಲೆಯ 72 ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಂದಿರ, ಮಸೀದಿ, ಚರ್ಚ್, ಸರಕಾರಿ ಕಚೇರಿ ಸೇರಿದಂತೆ ಖಾಲಿ ಇರುವ ಜಾಗದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಈಗಾಗಲೇ ಸಂಘ ಸಂಸ್ಥೆಗಳು ಹಾಗೂ ಸರಕಾರಿ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಬಳುವಳಿಯಾಗಿ ನೀಡುವ ನಿಟ್ಟಿನಲ್ಲಿ ಈ ಕಾರ್ಯವನ್ನು ನಾವು ಮಾಡುವುದು ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು.

ನಾವು ಪಶ್ಚಿಮ ಘಟ್ಟದ ತಪ್ಪಲಲ್ಲಿದ್ದರೂ ಈ ಬಾರಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಹರಸಾಹಸ ಪಡಬೇಕಾಯಿತು. ಈ ನಿಟ್ಟಿನಲ್ಲಿ ಪ್ರಾಕೃತಿಕ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗಿದೆ. ಹಸಿರು ಗ್ರಾಮ, ಹಸಿರು ಶಾಲೆ, ಚಿಣ್ಣರ ವನ್ಯದರ್ಶನ, ಸಿರಿ ಚಂದನವನ, ದೇವೀವನ, ಔಷಧಿ ವನ ಮೊದಲಾದ ಕಾರ್ಯಕ್ರಮಗಳ ಮೂಲಕ ರಾಜ್ಯ ಸರಕಾರ ಈಗಾಗಲೇ ಪರಿಸರ ಸಂರಕ್ಷಣೆಗೆ ಒತ್ತು ನೀಡಿದೆ. ಗಿಡ ನೆಟ್ಟು ಕಾಡು ಮಾಡುವ ಹೆಗ್ಗಳಿಕೆ ನಮ್ಮದಲ್ಲವಾಗಿದ್ದರೂ ಗಿಡದ ಮಹತ್ವದ ಮೂಲಕ ಹಸಿರು ಪ್ರದೇಶಗಳನ್ನು ಹೆಚ್ಚಿಸುವ ಕೆಲಸವನ್ನು ಈ ಕಾರ್ಯಕ್ರಮಗಳ ಮೂಲಕ ನಡೆಸಲಾಗುತ್ತಿದೆ ಎಂದವರು ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂಜಯ್ ಬಿಜ್ಜೂರು, ಮುಂದಿನ ವರ್ಷ ಕಾರ್ಪೊರೇಟ್ ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲೆಯಲ್ಲಿ 7,000 ಸಸಿಗಳನ್ನು ಬೆಳೆಸಲು ಅನುದಾನಕ್ಕೆ ಒಪ್ಪಿಗೆ ಪಡೆಯಲಾಗಿದೆ. ಗಿಡಗಳನ್ನು ನೆಡಲು ಬಯಸುವ ಶಾಲಾ ಕಾಲೇಜು, ಸಂಘ ಸಂಸ್ಥೆಗಳು ಜುಲೈ 30ರೊಳಗೆ ಕನಿಷ್ಠ 5 ಗಿಡಗಳನ್ನು ಅರಣ್ಯ ಇಲಾಖೆಯಿಂದ ಪಡೆದು ಕಾರ್ಪೊರೇಟ್ ಸಂಸ್ಥೆಗಳ ಸಹಕಾರದಲ್ಲಿ ಬೆಳೆಸಬಹುದಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ರವೀಂದ್ರ ಪಿ. ಬೈಂದೂರು ಅವರ ಪರಿಸರ ಕಾಳಜಿಯ ಹಾಡುಗಳ ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಪ್ರಮಾಣ ವಚನ ಬೋಧಿಸಲಾಯಿತು. ಇದೇ ವೇಳೆ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಗಿಡ ನೆಟ್ಟು ಸಾಧನೆ ಮಾಡಿರುವ ಲಕ್ಷ್ಮೀಶ ತೋಳ್ಪಾಡಿ, ಚಂದ್ರಶೇಖರ ದಾಮ್ಲೆ, ಕೃಷ್ಣ ಭಟ್, ಸ್ಪಂದನಾ ನಾಗರಾಜ್, ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್, ಗ್ರಾಮ ಅರಣ್ಯ ಸಮಿತಿಗೆ ‘ಅರಣ್ಯ ಮಿತ್ರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ವೇಳೆ ಪರಿಸರ ಸಂರಕ್ಷಣೆಯಲ್ಲಿ ಮಂಗಳೂರು ವಿಭಾಗ ಮಟ್ಟದಲ್ಲಿ ಸೇವೆ ಸಲ್ಲಿಸಿರುವ ಸುಂದರ ಶೆಟ್ಟಿ, ಕೃಷ್ಣಪ್ಪ, ಶೀನಪ್ಪ, ರೋಹಿತ್, ಕೆ. ಅಣ್ಣು ನಾಯ್ಕ, ಮಂಜುನಾಥ ಆಚಾರ್ಯ, ರಾಜೇಶ್‌ರವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮೇಯರ್ ಹರಿನಾಥ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಮೊಯ್ದೀನ್ ಬಾವ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಗೌರವ ವನ್ಯಜೀವಿ ಪರಿಪಾಲಕ ಕಿರಣ್ ಬುಡ್ಲೆಗುತ್ತು, ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್, ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಎಸ್. ಶಾಂತಪ್ಪ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಮನಪಾ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ, ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್ ಮೊದಲಾದವರು ಉಪಸ್ಥಿತರಿದ್ದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ. ಹನುಮಂತಪ್ಪ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News