ಜಿಲ್ಲೆಯಲ್ಲಿ ಪಡಿತರ ಅರ್ಜಿ ವಿಲೇವಾರಿಗೆ ಶೀಘ್ರ ಕ್ರಮ: ಯು.ಟಿ.ಖಾದರ್
ಕೊಣಾಜೆ, ಜು.9: ಮುಂದಿನ ದಿನಗಳಲ್ಲಿ ಆಯಾ ಗ್ರಾಮ ಪಂಚಾಯತ್‌ನಲ್ಲೇ ಪಡಿತರ ಚೀಟಿ ಪಡೆಯುವ ಅವಕಾಶ ಕಲ್ಪಿಸಲಾಗುತ್ತದೆ. ಈಗಾಗಲೇ ರಾಜ್ಯದಲ್ಲಿ 17 ಲಕ್ಷ ಪಡಿತರ ಚೀಟಿಗೆ ಅರ್ಜಿ ಬಾಕಿಯಿದ್ದು ಜಿಲ್ಲೆಯಲ್ಲಿ 11 ಸಾವಿರ ಅರ್ಜಿಗಳು ಬಾಕಿಯಿವೆ, ಶೀಘ್ರ ಎಲ್ಲಾ ಅರ್ಜಿ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ಪಾವೂರು ಗ್ರಾಮ ಪಂಚಾಯತ್ ನೂತನ ಆಡಳಿತವು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶನಿವಾರ ವರ್ಷ ತುಂಬಿದ ಹರ್ಷ ಕಾರ್ಯಕ್ರಮದ ಪ್ರಯುಕ್ತ ಪಂಚಾಯತ್ ಸಮುದಾಯ ಭವನದಲ್ಲಿ ನಡೆದ ಅಭಿವೃದ್ಧಿಯ ಅವಲೋಕನ, ವನಮಹೋತ್ಸವ, ಸಾಧಕರಿಗೆ ಸನ್ಮಾನ ಹಾಗೂ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾವೂರು ಗ್ರಾಮದಲ್ಲಿ ಈಗಾಗಲೇ ವಿವಿಧ ಕಾಮಗಾರಿ ನಡೆಸಲಾಗಿದೆ. ಗಾಡಿಗದ್ದೆ ರಸ್ತೆಗೆ 25 ಲಕ್ಷ ರೂ. ಅನುದಾನದಲ್ಲಿ ಶಾಶ್ವತ ಕಾಮಗಾರಿ ನಡೆಯುತ್ತಿದೆ. ಗ್ರಾಮದ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಲಾಗಿದ್ದು ಉಳಿದ ಕಾಮಗಾರಿಗಳನ್ನು ಹಂತ ಹಂತವಾಗಿ ನಡೆಸಲಾಗುವುದು. ಇದಕ್ಕೆ ಹಿರಿಯರು, ಕಿರಿಯರ ಸಹಕಾರ ಅಗತ್ಯ. ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ಬಗ್ಗೆ ಸಂಚಿಕೆ ಬಿಡುಗಡೆಗೊಳಿಸುವುದರಿಂದ ಎಲ್ಲರಿಗೂ ಸಮಗ್ರ ಮಾಹಿತಿ ಲಭಿಸಲು ಸಾಧ್ಯ. ಪಂಚಾಯತ್ ಆವರಣದಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸುವುದರಿಂದ ಪರಿಸರ ಸ್ವಚ್ಛತೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಲು ಸಾಧ್ಯ. ಈ ಮೂಲಕ ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಸಾಮಾಜಿಕವಾಗಿಯೂ ಮುನ್ನಡೆಯಬೇಕು ಎಂದು ತಿಳಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಪಾವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಟಿ.ಫಿರೋಝ್, ಸದಸ್ಯರಾದ ಮುಹಮ್ಮದ್ ಇನೋಳಿ, ವಿವೇಕ್ ರೈ, ಮಜೀದ್ ಸಾತ್ಕೋ, ರುಪಿನಾ ಲೂವಿಸ್, ಐ.ಬಿ.ಸಾದಿಕ್, ಮಾಜಿ ಉಪಾಧ್ಯಕ್ಷ ವಲೇರಿಯನ್ ಡಿಸೋಜ, ಅಭಿವೃದ್ಧಿ ಅಧಿಕಾರಿ ರಜನಿ, ಕಾರ್ಯದರ್ಶಿ ಚಿತ್ರಾಕ್ಷಿ, ಸಿಬ್ಬಂದಿ ಚಿತ್ರಾ, ಅಂಗನವಾಡಿ ಮೇಲ್ವಿಚಾರಕಿ ಭಾರತಿ ಪಟಾಗಾರ, ಪಾವೂರು ಕಾಂಗ್ರೆಸ್ ಅಧ್ಯಕ್ಷ ಉಗ್ಗಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.