ಉಪ್ಪಿನಂಗಡಿ: ಬೃಹತ್ ಮರ ಉರುಳಿ ಮನೆಗೆ ಹಾನಿ
ಉಪ್ಪಿನಂಗಡಿ, ಜು.9: ಇಂದು ನಸುಕಿನ ಜಾವ ಬೀಸಿದ ಭಾರೀ ಗಾಳಿಗೆ ಮನೆಯ ಮೇಲೆ ಮರವೊಂದು ಬುಡ ಸಮೇತ ಉರುಳಿ ಬಿದ್ದ ಘಟನೆ ಪುಳಿತ್ತಡಿಯಲ್ಲಿ ಸಂಭವಿಸಿದ್ದು, ಮನೆಗೆ ಭಾಗಶಃ ಹಾನಿಯಾಗಿದೆ.
ಉಪ್ಪಿನಂಗಡಿ ಗ್ರಾಮದ ಪುಳಿತ್ತಡಿಯ ಮೂಕಾಂಬಿಕಾ ರೈ ಎಂಬವರ ಮನೆಗೆ ಮರ ಬಿದ್ದಿದ್ದು, ಘಟನೆಯಿಂದ ಸುಮಾರು 1 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ. ಅವರ ಮನೆಯ ಹಿಂದಿದ್ದ ಮರವೊಂದು ಶನಿವಾರ ನಸುಕಿನ ಜಾವ 2:30ರ ಸುಮಾರಿಗೆ ಬೀಸಿದ ಜೋರಾದ ಗಾಳಿಗೆ ಬುಡಸಮೇತ ಉರುಳಿ ಮನೆಯ ಮೇಲೆ ಬಿತ್ತು. ಮರ ಬಿದ್ದ ರಭಸಕ್ಕೆ ಅಲ್ಲೇ ಇದ್ದ ಅಡಿಕೆ ಮರವೂ ಕೂಡಾ ತುಂಡಾಗಿ ಮನೆಯ ಮೇಲೆಯೇ ಉರುಳಿದೆ. ಮರ ಬಿದ್ದ ರಭಸಕ್ಕೆ ಮನೆಯ ಒಂದು ಭಾಗದ ಮಾಡು ಸಂಪೂರ್ಣ ಹಾನಿಗೀಡಾಗಿದ್ದು, ಹಂಚುಗಳೆಲ್ಲಾ ಪುಡಿಪುಡಿಯಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಮನೆಯ ಅಡುಗೆ ಕೋಣೆ ಸೇರಿದಂತೆ ಇನ್ನೆರಡು ಕೋಣೆಗಳ ಮಾಡು ಸಂಪೂರ್ಣ ತುಂಡಾಗಿ, ನೆಲಕಚ್ಚಿರುವುದರಿಂದ ಮಳೆ ನೀರೆಲ್ಲಾ ಮನೆಯೊಳಗೆ ಬಿದ್ದು, ಮನೆ ಕೆರೆಯಂತಾಗಿತ್ತು. ಘಟನೆ ನಡೆಯುವ ಸಂದರ್ಭ ಮೂಕಾಂಬಿಕ ರೈ, ಅವರ ಮಗ, ಮಗಳು, ಸೊಸೆ ಮತ್ತು ಅವರ ಒಂದೂವರೆ ವರ್ಷದ ಮಗು ಮನೆಯಲ್ಲಿದ್ದರು. ಅದೃಷ್ಟವಶಾತ್ ಇವರೆಲ್ಲಾ ಅಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಉಪ್ಪಿನಂಗಡಿ ಗ್ರಾಮ ಕರಣಿಕ ರಮಾನಂದ ಚಕ್ಕಡಿ, ಗ್ರಾಮ ಸಹಾಯಕ ಯತೀಶ್, ಗ್ರಾಮ ಪಂಚಾಯತ್ ಸದಸ್ಯ ಇಬ್ರಾಹೀಂ ಯು.ಕೆ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.