×
Ad

ತೊಕ್ಕೊಟ್ಟುವಿನಲ್ಲಿ ಬಿಜೆಪಿಯಿಂದ ಧರಣಿ

Update: 2016-07-09 21:18 IST

ಉಳ್ಳಾಲ, ಜು.9: ಯಾವುದೇ ಕೊಲೆ ಅಥವಾ ಆತ್ಮಹತ್ಯೆ ಪ್ರಕರಣಗಳು ನಡೆದಾಗ ಹೇಳಿಕೆಗಳು ಪೊಲೀಸರ ತನಿಖೆಗೆ ಪೂರಕವಾಗಿರುತ್ತವೆ. ದಕ್ಷ ಪೊಲೀಸ್ ಅಧಿಕಾರಿ ಗಣಪತಿ ಅವರು ಸಾಯೋದಕ್ಕೂ ಮುಂಚೆ ಸಚಿವ ಕೆ.ಜೆ ಜಾರ್ಜ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಕಿರುಕುಳವೇ ತನ್ನ ಸಾವಿಗೆ ಕಾರಣವೆಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರೂ ಸಹ ಆರೋಪಿಗಳ ವಿರುದ್ಧ ಪೊಲೀಸ್ ಇಲಾಖೆಯು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗಾಗಲೇ ಕಾಂಗ್ರೆಸ್ ಆಡಳಿತದ ದಬ್ಬಾಳಿಕೆಗೆ ಹಲವು ಉನ್ನತ ಹುದ್ದೆಯ ದಕ್ಷ ಅಧಿಕಾರಿಗಳು ಪ್ರಾಣವನ್ನು ಅರ್ಪಿಸಿದ್ದಾರೆ. ಕರ್ನಾಟಕದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರಕಾರವು ಇದುವರೆಗೂ ಜನರಿಗೆ ಒಳಿತನ್ನು ಏನೂ ಮಾಡಿಲ್ಲವಾದರೂ, ಕೆಡುಕನ್ನು ಮಾತ್ರ ಪದೇ ಪದೇ ಮಾಡಬೇಡಿ. ಜನರೇ ನಿಮ್ಮ ವಿರುದ್ಧ ದಂಗೆ ಏಳುತ್ತಾರೆಂದು ವಿದಾನಪರಿಷತ್ ಸದಸ್ಯ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಸರಕಾರಕ್ಕೆ ಎಚ್ಚರಿಸಿದರು.

ಮಂಗಳೂರು ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ ದಕ್ಷ ಅಧಿಕಾರಿಯ ಸಾವಿಗೆ ಕಾರಣರಾದ ಸಚಿವ ಕೆ.ಜೆ ಜಾರ್ಜ್ ರಾಜೀನಾಮೆ ನೀಡುವಂತೆ ಮತ್ತು ತಪ್ಪಿತಸ್ಥ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ತೊಕೊಟ್ಟಿನಲ್ಲಿ ಬಿಜೆಪಿ ಮಂಗಳೂರು ವಿದಾನಸಭಾ ಕ್ಷೇತ್ರದ ವತಿಯಿಂದ ನಡೆದ ಧರಣಿಯನ್ನುದ್ದೇಶಿಸಿ ಮಾತನಾಡಿದರು.

ಮೈಸೂರಿನ ಪ್ರಾಮಾಣಿಕ ಜಿಲ್ಲಾಧಿಕಾರಿ ಶಿಖಾ ಅವರಿಗೆ ರಾಜಾರೋಷವಾಗಿ ಬೆದರಿಕೆ ನೀಡಿರುವ ಮುಖ್ಯಮಂತ್ರಿ ಆಪ್ತ ಮರೀಗೌಡನನ್ನು ಬಂಧಿಸಲು ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ. ಅರಣ್ಯ ಸಚಿವರ ಕ್ಷೇತ್ರದಲ್ಲೇ ಅರಣ್ಯ ನಾಶ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ಒದಗಿದೆ. ಸರಕಾರವು ನಾಡಿನ ಜನತೆಗೆ ಒಳಿತನ್ನು ಮಾಡದಿದ್ದರೂ ಇದೇ ರೀತಿ ತನ್ನ ರೌಡಿ ಸಾಮ್ರಾಜ್ಯವನ್ನು ಮುಂದುವರಿಸಿದರೆ ಜನರೇ ನಿಮ್ಮ ವಿರುದ್ಧ ತಿರುಗಿ ಬಿದ್ದು ದಂಗೆ ಏಳುತ್ತಾರೆಂದು ಎಚ್ಚರಿಕೆ ನೀಡಿದರು.
    
ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ ದಕ್ಷ ಅಧಿಕಾರಿ ಗಣಪತಿ ಅವರು ಸತ್ತು ಸಮಾಧಿಯಾಗಿದ್ದು ಇದರೊಂದಿಗೆ ಕಾಂಗ್ರೆಸ್ ಸರಕಾರವೂ ಸಮಾಧಿಯಾಗಿ ಹೋಗಿದೆ. ಸಿಐಡಿ ಅಧಿಕಾರಿಗಳು ಸರಕಾರದೊಂದಿಗೆ ಬೆರೆತಿದ್ದು ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಯಿಂದಷ್ಟೇ ನಿಷ್ಪಕ್ಷಪಾತವಾಗಿ ಭೇದಿಸಲು ಸಾಧ್ಯ. ಸಾಮಾನ್ಯ ಜನರ ಮೇಲೆ ಸಣ್ಣ ಆರೋಪಗಳು ಬಂದಾಗ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿ ಜೈಲಿಗಟ್ಟುವ ಘಟಾನುಗಟಿ ಪೊಲೀಸ್ ಅಧಿಕಾರಿಗಳು ಗಣಪತಿ ಆತ್ಮಹತ್ಯೆಗೆ ಕಾರಣರಾದ ಸಚಿವ ಕೆ.ಜೆ ಜಾರ್ಜ್‌ರ ವಿರುದ್ಧ ಪ್ರಕರಣ ದಾಖಲಿಸಲು ಕೂಡಾ ಹೆದರುವುದೇಕೆಂದು ಹೇಳಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಶಾಸಕ ಜಯರಾಮ್ ಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಜಿಲ್ಲಾ ಕಾರ್ಯದರ್ಶಿ ನಮಿತಾ ಶ್ಯಾಂ, ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್, ಪ್ರ.ಕಾರ್ಯದರ್ಶಿ ಮೋಹನ್ ರಾಜ್, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಅಲ್ಪ ಸಂಖ್ಯಾತ ನಿಗಮದ ಮಾಜಿ ಅಧ್ಯಕ್ಷ ಅಬೂಬಕರ್, ಮುಖಂಡರಾದ ಯಶವಂತ್ ಅಮೀನ್, ಜೀವನ್ ಕೆರೆಬೈಲು, ಉದಯ್ ಕುಮಾರ್ ಶೆಟ್ಟಿ ಸುಳ್ಳೆಂಜೀರ್, ಸುರೇಶ್ ಆಳ್ವ, ಸೀತಾರಾಮ ಬಂಗೇರ, ದೇವಕಿ ರಾಘವ, ಭಗವಾನ್ ದಾಸ್ ತೊಕ್ಕೊಟ್ಟು ಧರಣಿಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News