ಕಡ್ಡಾಯ ಶಿಕ್ಷಣ, ಬಾಲಕಾರ್ಮಿಕರ ವಯೋಮಿತಿ 18ಕ್ಕೇರಿಸಲು ಪ್ರಸ್ತಾವ: ಕೃಪಾ ಆಳ್ವ

Update: 2016-07-09 18:28 GMT

ಬಂಟ್ವಾಳ, ಜು.9: ಕಡ್ಡಾಯ ಶಿಕ್ಷಣ ಕಾಯ್ದೆ ಹಾಗೂ ಬಾಲ ಕಾರ್ಮಿಕ ಪದ್ಧತಿಯಲ್ಲಿ ಮಕ್ಕಳ ವಯೋಮಿತಿಯನ್ನು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ಪ್ರಕಾರ 14 ವರ್ಷದಿಂದ 18 ವರ್ಷಕ್ಕೆ ಏರಿಸುವಂತೆ ಈಗಾಗಲೇ ಕೇಂದ್ರ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿರುವುದಾಗಿ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಹೇಳಿದ್ದಾರೆ. ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್‌ಕ್ಲಬ್ ಬಂಟ್ವಾಳ, ಪತ್ರಕರ್ತ ಸಂಘದ ರಜತ ವರ್ಷಾಚರಣೆ ಸಮಿತಿಯ ಜಂಟಿ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಯ ಅಂಗವಾಗಿ ಶನಿವಾರ ಬಿ.ಸಿ.ರೋಡ್‌ನಲ್ಲಿರುವ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕಡಿಮೆ ವೇತನ ನೀಡಿ ಮಕ್ಕಳನ್ನು ದುಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ‘ಶಾಲೆ ಕಡೆ ನನ್ನ ನಡೆ’ ಆಂದೋಲನವನ್ನು ರಾಜ್ಯವ್ಯಾಪಿ ಹಮ್ಮಿಕೊಳ್ಳಲಾಗಿದೆ ಎಂದವರು ವಿವರಿಸಿ ದರು. ಪ್ರತೀ ಮಕ್ಕಳಿಗೂ ಪಿಯುಸಿವರೆಗಿನ ಶಿಕ್ಷಣವನ್ನು ಕಡ್ಡಾಯವಾಗಿ ನೀಡುವ ನಿಟ್ಟಿನಲ್ಲಿ ಪೋಷಕರು ಜಾಗೃತರಾಗಬೇಕು ಎಂದರು.
ಆರ್‌ಟಿಇ ಕಾಯ್ದೆಯಡಿ ಮಕ್ಕಳ ಶಾಲಾ ದಾಖಲಾತಿಯಲ್ಲಿ ಉಂಟಾಗುತ್ತಿರುವ ಗೊಂದಲದ ಬಗ್ಗೆ ಪ್ರಶ್ನಿಸಿದಾಗ, ಈ ಕುರಿತು ಮೂರು ಸಾವಿರ ದೂರು ಅರ್ಜಿಗಳು ಆಯೋಗಕ್ಕೆ ಬಂದಿದ್ದು, ವಿಚಾರಣೆ ನಡೆಯುತ್ತಿದೆ ಎಂದರು. ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಹಾಗೂ ಮಕ್ಕಳ ಹಕ್ಕುಗಳ ಕುರಿತಾಗಿ ಶಾಲಾ ಶಿಕ್ಷಕರಿಗೆ ಸೂಕ್ತ ತರಬೇತಿ-ಮಾಹಿತಿ ಸಿಗುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿ ಸಿದ ಕೃಪಾ ಆಳ್ವ, ಈ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗದ ರಾಷ್ಟ್ರಮಟ್ಟದ ತರಬೇತು ದಾರರಿಂದ ರಾಜ್ಯದ ನಾಲ್ಕು ವಿಭಾಗಗಳಲ್ಲಿ 550 ಪ್ರಾಂಶುಪಾಲರಿಗೆ ತರಬೇತಿ ಕಾರ್ಯಾಗಾರವನ್ನು ಅಕ್ಟೋಬರ್‌ನಲ್ಲಿ ಆಯೋಜಿಲಾಗುವುದು ಎಂದರು.
ಪತ್ರಕರ್ತೆ ರೇಷ್ಮಾ ಜಿ. ಉಳ್ಳಾಲ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೌನೇಶ ವಿಶ್ವಕರ್ಮ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News