ಕೈರಾನಾ,ಮಥುರಾ,ದಾದ್ರಿ ಘಟನೆಗಳ ಕುರಿತು ವರದಿ ರಾಷ್ಟ್ರಪತಿಗೆ ರವಾನೆ

Update: 2016-07-10 12:40 GMT

 ಲಕ್ನೋ,ಜು.10: ಕೈರಾನಾದಿಂದ ಹಿಂದುಗಳ ವಲಸೆ,ಮಥುರಾದ ಜವಾಹರ ಬಾಗ್ ಘಟನೆ ಮತ್ತು ದಾದ್ರಿಯಲ್ಲಿ ಗೋಮಾಂಸ ಸೇವನೆ ಆರೋಪದಲ್ಲಿ ವ್ಯಕ್ತಿಯ ಹತ್ಯೆ ಕುರಿತಂತೆ ರಾಜ್ಯ ಸರಕಾರವು ಸಿದ್ಧಪಡಿಸಿರುವ ‘ವಿಶೇಷ ’ ವರದಿಯೊಂದನ್ನು ಉತ್ತರ ಪ್ರದೇಶದ ರಾಜ್ಯಪಾಲ ರಾಮ ನಾಯ್ಕೆ ಅವರು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ರವಾನಿಸಿದ್ದಾರೆ.

ಮುಖ್ಯಮಂತ್ರಿ ಅಖಿಲೇಶ ಯಾದವ ಅವರು ಜೂ.26ರಂದು ರಾಜ್ಯಪಾಲರಿಗೆ ಈ ವರದಿಯನ್ನು ಸಲ್ಲಿಸಿದ್ದರು.

ಮುಝಫರ್ ನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ 2013ರಲ್ಲಿ ಸಂಭವಿಸಿದ್ದ ಕೋಮುದಂಗೆಯಿಂದ ನಲುಗಿದ್ದ ಕೈರಾನಾದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಿಂದಾಗಿ ಅಲ್ಲಿಯ ಹಿಂದುಗಳು ಬಲವಂತದಿಂದ ವಲಸೆ ಹೋಗುತ್ತಿದ್ದಾರೆ ಎಂಬ ಬಿಜೆಪಿ ಸಂಸದ ಹುಕುಂ ಸಿಂಗ್ ಹೇಳಿಕೆ ವಿವಾದವನ್ನು ಸೃಷ್ಟಿಸಿತ್ತು. ಈ ಕುರಿತು ವಿವರವಾದ ವರದಿಯನ್ನು ಸಲ್ಲಿಸುವಂತೆ ಕೇಂದ್ರವು ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿತ್ತು.

ವಲಸೆ ಆರೋಪವನು ತಳ್ಳಿಹಾಕಿದ್ದ ಸಮಾಜವಾದಿ ಪಕ್ಷವು, ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿಯು ರಾಜ್ಯದಲ್ಲಿ ಕೋಮು ಸೌಹಾರ್ದವನ್ನು ಕೆಡಿಸುತ್ತಿದೆ ಎಂದು ಆಪಾದಿಸಿತ್ತು.

ಕಳೆದ ವರ್ಷದ ಸೆ.28ರಂದು ದಾದ್ರಿಯ ಬಿಸಾಡಾ ಗ್ರಾಮದಲ್ಲಿ ತನ್ನ ಮನೆಯಲ್ಲಿ ಗೋಮಾಂಸವನ್ನು ದಾಸ್ತಾನಿರಿಸಿದ್ದ ಮತ್ತು ಅದನ್ನು ಸೇವಿಸಿದ್ದ ಆರೋಪದಲ್ಲಿ ಮೊಹಮ್ಮದ್ ಅಖ್ಲಾಕ್(52) ಎನ್ನುವವರನ್ನು ದುಷ್ಕರ್ಮಿಗಳ ಗುಂಪೊಂದು ಥಳಿಸಿ ಹತ್ಯೆಗೈದಿತ್ತು. ಈ ಘಟನೆ ರಾಷ್ಟ್ರಾದ್ಯಂತ ಅಸಹಿಷ್ಣುತೆ ಕುರಿತು ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿತ್ತು.

ಈ ವರ್ಷದ ಜೂ.2ರಂದು ಮಥುರಾದ ಜವಾಹರ ಬಾಗ್ ಅತಿಕ್ರಮಣ ತೆರವು ಕಾರ್ಯಾಚರಣೆಯ ವೇಳೆ ಅತಿಕ್ರಮಣದಾರರು ಮತ್ತು ಪೊಲೀಸರ ನಡುವಿನ ಹಿಂಸಾತ್ಮಕ ಘರ್ಷಣೆಗಳಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ 29 ಜನರು ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News