ಬೆಳ್ತಂಗಡಿ: ಮಳೆಯ ಆರ್ಭಟಕ್ಕೆ ಸೇತುವೆ ಕುಸಿತ
ಬೆಳ್ತಂಗಡಿ,ಜು.10: ಕಳೆಂಜ ಗ್ರಾಮದಿಂದ ಶಾಲೆತ್ತಡ್ಕ ವಯಾ ಅರಸಿನಮಕ್ಕಿ ಮತ್ತು ಕೊಕ್ಕಡ ಭಾಗಕ್ಕೆ ಸಂಪರ್ಕವಿರುವ ಪ್ರಮುಖ ರಸ್ತೆಯ ಕಲ್ಲುಗುಡ್ಡೆ ಎಂಬಲ್ಲಿ ಇದ್ದ ಸೇತುವೆಯೊಂದು ಮಳೆಯ ನೀರಿನ ಕೊರೆತಕ್ಕೊಳಗಾಗಿ ಅರ್ಧಭಾಗ ಕುಸಿದು ಬಿದ್ದಿದೆ.
ಕೆಲ ವರ್ಷಗಳ ಹಿಂದೆ ಈ ರಸ್ತೆ ಹೊಸದಾಗಿ ಡಾಮರನ್ನು ಕಂಡಿತ್ತು ಆದರೆ ಈ ಮೋರಿಯನ್ನು ಮಾತ್ರ ಯಾವುದೇ ರಿಪೇರಿ ಮಾಡದೆ ಹಾಗೆಯೇ ಉಳಿಸಿಕೊಳ್ಳಲಾಗಿತು. ಇದೀಗ ಈ ಬಾರಿಯ ಮಳೆ ಆರಂಭವಾಗುತ್ತಲೇ ಸೇತುವೆ ಅರ್ಧ ಭಾಗ ಕುಸಿದಿದೆ. ಈ ಕಾರಣದಿಂದ ಈ ರೂಟಿನಲ್ಲಿದ್ದ ಬಸ್ಸು ಸರ್ವೀಸ್ ಕೂಡಾ ಇದೀಗ ನಿಂತಿದೆ. ಪ್ರಸಕ್ತ ಅವಧಿಯ ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ ಈ ಘಟನೆ ನಡೆಯುತ್ತಲೇ ಕೂಡಲೇ ಈ ಸಮಸ್ಯೆಯನ್ನು ಮೋರಿ ಕುಸಿದಿರುವ ಮಾಹಿತಿ ಪಡೆದು ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಜಿ.ಪಂ. ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಇದೀಗ ಈ ರಸ್ತೆಯಲ್ಲಿ ಸಂಚಾರ ಕಡಿತಗೊಂಡಿದ್ದು ಸ್ಥಳೀಯ ಕೆಲವು ಜೀಪುಗಳು ಮಾತ್ರ ಉಪಾಯವಿಲ್ಲದೆ ಇದೇ ಸೇತುವೆಯ ಅರ್ದಭಾಗದಲ್ಲಿ ಸಂಚರಿಸುವಂತಾಗಿದೆ. ಸೇತುವೆ ಕುಸಿದಿದೆ ಅನ್ನುವ ಸೂಕ್ತ ಎಚ್ಚರಿಕೆ ವ್ಯವಸ್ಥೆಯನ್ನು ಈ ಭಾಗದಲ್ಲಿ ಕೂಡಲೇ ಅಳವಡಿಸಬೇಕಾಗಿದೆ.