ಗದ್ದೆಗಿಳಿದು ಭತ್ತ ನಾಟಿ ಯಂತ್ರದಲ್ಲಿ ನಾಟಿ ಮಾಡಿದ ಸಚಿವ!

Update: 2016-07-10 15:39 GMT

ಬ್ರಹ್ಮಾವರ, ಜು.10: ಸಚಿವರೆಂದರೆ ಗರಿ ಗರಿ ಪ್ಯಾಂಟ್, ಶರ್ಟ್ ತೊಟ್ಟು ಅದರ ಇಸ್ತ್ರಿ ಕೆಡದಂತೆ ನೋಡಿಕೊಂಡು, ಮಾತು..ಮಾತು...ಮಾತಿನ ಗೈರತ್ತಿನ ಮೂಲಕ ಜನರ ಮಿದುಳನ್ನು ಕೊರೆಯುವವರು ಎಂಬ ಜನಸಾಮಾನ್ಯರ ಸಾಮಾನ್ಯ ಗ್ರಹಿಕೆಯನ್ನು ಇಂದು ಇಲ್ಲಿ ಸುಳ್ಳು ಮಾಡಿದವರು ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದು ಬಂದು ಯುವ ರಾಜಕಾರಣಿಯಾದ ಹಿರಿಯ ಜೆಡಿಎಸ್ ನಾಯಕ ಮಾಜಿ ಸಚಿವ ದಿ.ಸಿ.ಬೈರೇಗೌಡರ ಪುತ್ರ, ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡರು.

ಚಾಂತಾರು ಅಗ್ರಹಾರ ಗುಚ್ಛಗ್ರಾಮದಲ್ಲಿ ಇಂದು ಆಯೋಜಿಸಲಾದ ಯಾಂತ್ರೀಕೃತ ಭತ್ತ ನಾಟಿಯ ಬೃಹತ್ ಆಂದೋಲನವನ್ನು ಸ್ವತಹ ಗದ್ದೆಗೆ ಇಳಿದು ಭತ್ತ ನಾಟಿ ಮಾಡುವ ಯಂತ್ರ (4 ಸಾಲು)ವನ್ನು ಬಳಸಿ ಒಂದು ಸಾಲು ಪುಟ್ಟ ನೇಜಿಯನ್ನು ನೆಡುವ ಮೂಲಕ ಉದ್ಘಾಟಿಸಿದರು.

ಮೂಲತ: ಕೋಲಾರದವರಾಗಿ ಸ್ವತಹ ಕೃಷಿಕನಲ್ಲದಿದ್ದರೂ, ಕಳೆದ ಮೂರು ವರ್ಷಗಳಿಂದ ಕೃಷಿ ಸಚಿವನಾಗಿ ನುರಿತ ಕೃಷಿಕನಂತೆ ಕೃಷಿಯ ಕುರಿತು ರೈತರಿಗೆ ಸರಳವಾಗಿ ವಿವರಿಸುವಷ್ಟು ತಿಳಿದುಕೊಂಡಿರುವ ಕೃಷ್ಣ ಬೈರೇಗೌಡ, ಇಂದು ಕೃಷಿ ಸಂಶೋಧನಾ ಕೇಂದ್ರಕ್ಕೆ ತೆರಳಿದಾಗಲೂ ತಮಗೆ ತಿಳಿಯದ ಅನೇಕ ಕೃಷಿ ತಂತ್ರಜ್ಞಾನದ ಮಾಹಿತಿಗಳನ್ನು ವಿದ್ಯಾರ್ಥಿಯಂತೆ ಕೇಳಿ ತಿಳಿದುಕೊಂಡರು.

ನಂತರ ಅಗ್ರಹಾರಕ್ಕೆ ಬಂದು ಇಲ್ಲಿ 200ಎಕರೆ ಪ್ರದೇಶದಲ್ಲಿ ನಾಟಿ ನಡೆಯಬೇಕಿದ್ದ ಗದ್ದೆ ಸುತ್ತಮುತ್ತ ಓಡಾಡಿದ ಸಚಿವರು, ಉದ್ಘಾಟನೆ ಮಾಡುವ ಸಮಯ ಬಂದಾಗ, ಪ್ಯಾಂಟ್‌ನ್ನು ಮೊಣಕಾಲಿನವರೆಗೆ ಮಡಚಿ, ಬರಿಗಾಲಿನಲ್ಲಿ ಕೆಸರು ತುಂಬಿದ ಗದ್ದೆಗೆ ಇಳಿದು ಯಂತ್ರ ಚಲಾಯಿಸುವ ಸಹಾಯಕನಿಂದ ಮಾಹಿತಿ ಪಡೆದು ತಾವೇ ಸ್ವತಹ ಯಂತ್ರ ಚಲಾಯಿಸಿ ನೇಜಿ ನೆಟ್ಟರು.

ಅಗ್ರಹಾರದ ಗುಚ್ಛ ಗ್ರಾಮದಲ್ಲಿ ಹಿಂದೆಲ್ಲಾ 30 ಎಕರೆ ಪ್ರದೇಶದಲ್ಲಿ ಕೃಷಿ ನಡೆಯುತಿದ್ದು, ಕಳೆದ ವರ್ಷ ಕೃಷಿ ಸಂಶೋದನಾ ಕೇಂದ್ರದ ಮೂಲಕ 100 ಎಕರೆ ಪ್ರದೇಶದಲ್ಲಿ ಕೃಷಿ ಪ್ರಯೋಗ ನಡೆಸಲಾಗಿತ್ತು. ಈ ಬಾರಿ ಸುಮಾರು 120 ರೈತರ 200 ಎಕರೆ ಪ್ರದೇಶದಲ್ಲಿ ಈ ಬಾರಿ ಒಂದೇ ದಿನದಲ್ಲಿ ನಾಟಿ ಮಾಡುವ ಗುರಿ ಇದೆ ಎಂದು ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News