×
Ad

ದಿಲ್ಲಿ ವಿಮಾನ ನಿಲ್ದಾಣದಲ್ಲಿ ಕಿರುಕುಳ,ಜನಾಂಗೀಯ ನಿಂದನೆ:ಮಣಿಪುರಿ ಮಹಿಳೆಯ ಆರೋಪ

Update: 2016-07-10 20:45 IST

ಹೊಸದಿಲ್ಲಿ,ಜು.10: ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ಅಧಿಕಾರಿಯೋರ್ವ ವಿಶ್ವ ಮಹಿಳಾ ಸಮ್ಮೇಳನವೊಂದರಲ್ಲಿ ಭಾಗವಹಿಸಲು ಸಿಯೋಲ್‌ಗೆ ತೆರಳುತ್ತಿದ್ದ ತನ್ನ ವಿರುದ್ಧ ಜನಾಂಗೀಯ ನಿಂದನೆಯನ್ನು ಮಾಡಿರುವುದಾಗಿ ಮಣಿಪುರ ಮೂಲದ ಮಹಿಳೆಯೋರ್ವರು ಆರೋಪಿಸಿದ್ದಾರೆ.

ಶನಿವಾರ ರಾತ್ರಿ ವಿಮಾನ ನಿಲ್ದಾಣದ ವಲಸೆ ಕೌಂಟರ್ ಬಳಿ ತೆರಳಿದ್ದಾಗ ತನ್ನ ಪಾಸ್‌ಪೋರ್ಟ್ ನೋಡಿದ ಅಧಿಕಾರಿ ‘ನೀನು ಭಾರತೀಯಳಂತೆ ಕಾಣುವುದಿಲ್ಲ ’ಎಂದು ಕುಹಕವಾಡಿದ್ದ ಎಂದು ಮೊನಿಕಾ ಖಂಗೆಂಬಾಮ್ ತನ್ನ ಫೇಸ್‌ಬುಕ್ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ.

ಮೊನಿಕಾ ಭಾರತೀಯಳೇ ಎನ್ನುವುದನ್ನು ತಿಳಿದುಕೊಳ್ಳಲು ಅಧಿಕಾರಿಯು ದೇಶದಲ್ಲಿ ಎಷ್ಟು ರಾಜ್ಯಗಳಿವೆ ಎಂದು ಪ್ರಶ್ನಿಸಿದ್ದ.

ತನಗೆ ವಿಮಾನ ಹತ್ತಲು ತಡವಾಗುತ್ತಿದೆ ಎಂದು ಕೇಳಿಕೊಂಡರೂ ಅಧಿಕಾರಿ ಕಿವಿಯನ್ನೇ ಕೊಟ್ಟಿರಲಿಲ್ಲ ಮತ್ತು ಆತನ ಪಕ್ಕದಲ್ಲಿದ್ದ ಮಹಿಳಾ ಅಧಿಕಾರಿ ಈ ತಮಾಷೆಯನ್ನು ಕಂಡು ನಗುತ್ತಿದ್ದಳು ಎಂದೂ ಮೊನಿಕಾ ಆರೋಪಿಸಿದ್ದಾರೆ.

ತಾನು ಮಣಿಪುರ ನಿವಾಸಿಯೆಂದು ಮೊನಿಕಾ ಹೇಳಿದಾಗ, ಅದಕ್ಕೆ ಹೊಂದಿಕೊಂಡಿರುವ ರಾಜ್ಯಗಳನ್ನು ಹೆಸರಿಸುವಂತೆ ಅಧಿಕಾರಿ ಸೂಚಿಸಿದ್ದ.

 ನನಗೆ ನಿಜಕ್ಕೂ ತಡವಾಗುತ್ತಿದೆ ಎಂದು ಅಲವತ್ತುಕೊಂಡರೂ,ಆ ಅಧಿಕಾರಿ ವಿಮಾನವು ನಿನ್ನನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಆರಾಮವಾಗಿ ಉತ್ತರಿಸು ಎಂದು ಹೇಳುತ್ತಲೇ ಇದ್ದ ಎಂದು ಆಕೆ ಆರೋಪಿಸಿದ್ದಾರೆ.

ಇದು ಜನಾಂಗೀಯ ನಿಂದನೆ ಮತ್ತು ಕಿರುಕುಳವಾಗಿದೆ, ಆದರೆ ಇದು ನನ್ನ ಸ್ಥೈರ್ಯವನ್ನು ಉಡುಗಿಸದು ಎಂದು ಮೊನಿಕಾ ಹೇಳಿದ್ದಾರೆ.

ಫೇಸ್‌ಬುಕ್‌ನಲ್ಲಿ ಮೊನಿಕಾ ದೂರಿನ ಹಿನ್ನೆಲೆಯಲ್ಲಿ ಹಲವಾರು ಟ್ವಿಟರ್ ಬಳಕೆದಾರರು ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಮತ್ತು ವಲಸೆ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News