×
Ad

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ : ಸಿಐಡಿ ತಂಡದಿಂದ ಮನೋರೋಗ ವೈದ್ಯರ ಭೇಟಿ

Update: 2016-07-10 21:10 IST

ಮಂಗಳೂರು, ಜು. 10: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಮಂಗಳೂರಿಗೆ ಆಗಮಿಸಿದ ಸಿಐಡಿ ತಂಡವು ರವಿವಾರವೂ ತನಿಖೆಯನ್ನು ಮುಂದುವರಿಸಿದೆ. ಗಣಪತಿ ಅವರು ಕಳೆದ  ತಿಂಗಳಿನಿಂದೀಚೆಗೆ ಚಿಕಿತ್ಸೆ ಪಡೆಯುತ್ತಿದ್ದರೆನ್ನಲಾದ ಹಿನ್ನೆಲೆಯಲ್ಲಿ ಇಂದು ನಗರದ ಖಾಸಗಿ ಆಸ್ಪತ್ರೆಯೊಂದರ ಮನೋರೋಗ ವೈದ್ಯರನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕಿದೆ.

ಸಿಐಡಿ ಎಡಿಜಿಪಿ ಪ್ರತಾಪ್ ರೆಡ್ಡಿ, ಸಿಐಡಿ ಐಜಿಪಿ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ಸಿಐಡಿ ಡಿವೈಎಸ್ಪಿಶ್ರೀಧರ್, ಇನ್‌ಸ್ಪೆಕ್ಟರ್ ಚೆನ್ನೇಗೌಡ ಶನಿವಾರ ಮಂಗಳೂರಿಗೆ ಆಗಮಿಸಿದ್ದರು. ತಂಡವು ರವಿವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿ ಗಣಪತಿಯವರಿಗೆ ತಿಂಗಳ ಕಾಲ ಚಿಕಿತ್ಸೆ ನೀಡಿದ್ದ ಮನೋರೋಗ ತಜ್ಞರ ಜೊತೆ ಸುಮಾರು ಅರ್ಧಗಂಟೆ ಕಾಲ ಮಾತುಕತೆ ನಡೆಸಿ ವಿವರಣೆ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಎಂ.ಕೆ.ಗಣಪತಿಯವರು ಚಿಕಿತ್ಸೆ ಪಡೆದ ವಿವರ, ಅವರು ಸೇವಿಸುತ್ತಿದ್ದ ಮಾತ್ರೆಗಳ ವಿವರವನ್ನು ಸಿಐಡಿ ತಂಡ ಪಡೆದು, ಎಲ್ಲ ಮಾಹಿತಿ ವೀಡಿಯೊದಲ್ಲಿ ದಾಖಲೀಕರಣ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಎಂ.ಕೆ.ಗಣಪತಿ ಅವರು ಮಂಗಳೂರು ಪಶ್ಚಿಮ ವಲಯ ಐಜಿಪಿ ಕಚೇರಿಯಲ್ಲಿ ಡಿವೈಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದರಿಂದ ಸಿಐಡಿ ತಂಡವು ಶನಿವಾರ ಸಂಜೆ ಡಿವೈಎಸ್ಪಿ ಕಚೇರಿಯ ಕಡತಗಳನ್ನು ಪರಿಶೀಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News