ಮಹಾರಾಷ್ಟ್ರ ಬೇಹು ಇಲಾಖೆಯಿಂದ ಝಾಕಿರ್ ನಾಯ್ಕ್ ಗೆ ಕ್ಲೀನ್ ಚಿಟ್
ಮುಂಬೈ, ಜು.12: ಖ್ಯಾತ ಧಾರ್ಮಿಕ ವಿದ್ವಾಂಸ ಡಾ.ಝಾಕಿರ್ ನಾಯ್ಕ್ ಅವರಿಗೆ ಕ್ಲೀನ್ ಚಿಟ್ ನೀಡಿರುವ ಮಹಾರಾಷ್ಟ್ರ ಬೇಹು ಇಲಾಖೆಯ ವಿಶೇಷ ತಂಡ ನಾಯ್ಕ್ ಅವರ ವಿರುದ್ಧ ಸದ್ಯಕ್ಕೆ ಯಾವುದೇ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಆದ್ದರಿಂದ ಅವರು ವಿದೇಶದಿಂದ ಭಾರತಕ್ಕೆ ಮರಳಿದಾಗ ಅವರನ್ನು ಬಂಧಿಸುವುದಿಲ್ಲ ಹಾಗೂ ಬಂಧಿಸಲು ಸಾಧ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಥಮ ಹಂತದಲ್ಲಿ ಯೂಟೂಬ್ ನಲ್ಲಿ ಲಭ್ಯ ನಾಯ್ಕ್ ಅವರ ನೂರಾರು ವೀಡಿಯೋಗಳನ್ನು ಈ ವಿಶೇಷ ತಂಡ ಸವಿವರವಾಗಿ ಅಧ್ಯಯನ ನಡೆಸಿದೆ. ಅದೇ ರೀತಿ ಬೇರೆ ರಾಜ್ಯಗಳಿಂದ ಸಿಕ್ಕಿರುವ ದಾಖಲೆಗಳನ್ನು ಪರಿಶೀಲಿಸಿದೆ.
ಆದರೆ ಇವುಗಳಿಂದ ಅವರ ಮೇಲೆ ಯಾವುದೇ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ವಿಶೇಷ ಬೇಹು ತಂಡ ಬಂದಿದೆ. ಹೆಚ್ಚೆಂದರೆ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಪ್ರಕರಣ ದಾಖಲಿಸಬಹುದು. ಆದರೆ ಅದನ್ನೂ ಅವರ ಭಾಷಣಗಳಲ್ಲಿ ಸಾಬೀತು ಪಡಿಸಲು ಸಾಧ್ಯವಿಲ್ಲ ಎಂದು ತಂಡ ತನಿಖೆಗೆ ಆದೇಶ ನೀಡಿರುವ ಸರಕಾರಕ್ಕೆ ತಿಳಿಸಿದೆ.
ಈಗ ಈ ತಂಡ ಝಾಕಿರ್ ನಾಯ್ಕ್ ಅವರ ಆರ್ಥಿಕ ವ್ಯವಹಾರಗಳ ಮೇಲೆ ಕಣ್ಣಿಟ್ಟಿದ್ದು ಅವರು ಮಾಡಿರುವ ಹೂಡಿಕೆಗಳನ್ನು ಪರಿಶೀಲನೆ ನಡೆಸುತ್ತಿದೆ.