ಮಾನಸಿಕ ಖಿನ್ನತೆಯೇ ಬಾಲಕಿ ಸಾವಿಗೆ ಕಾರಣ: ಪೊಲೀಸರ ಸ್ಪಷ್ಟನೆ
ಬಂಟ್ವಾಳ, ಜು. 12: ತುಂಬೆ ಸಮೀಪದ ಕಡೆಗೋಳಿ ಎಂಬಲ್ಲಿ 5ನೆ ತರಗತಿಯ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಮಾನಸಿಕ ಖಿನ್ನತೆಯೇ ಕಾರಣ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ತುಂಬೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ 5ನೆ ತರಗತಿಯ ವಿದ್ಯಾರ್ಥಿನಿ ಪೂಜಾಶ್ರೀ(10) ತಮ್ಮ ಮನೆಯ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು.
ಇಲ್ಲಿನ ನಿವಾಸಿ ಪ್ರಸಾದ್ ಮತ್ತು ಮಮತಾ ದಂಪತಿಯ ಪುತ್ರಿಯಾದ ಪೂಜಾಶ್ರೀ ಸೋಮವಾರ ಪರೀಕ್ಷೆ ಮುಗಿಸಿ ಮಧ್ಯಾಹ್ನ ಮನೆಗೆ ಆಗಮಿಸಿದ್ದಳು. ಊಟ ಮಾಡಿದ ಬಳಿಕ ಮನೆಯ ಕೊಠಡಿಯ ಬಾಗಿಲು ಹಾಕಿದ್ದ ಆಕೆ ಮನೆಯ ಎರಡು ಕಿಟಕಿಗಳಿಗೆ ಹಗ್ಗ ಕಟ್ಟಿ ಅದರ ಮಧ್ಯ ಭಾಗದಲ್ಲಿ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾಳೆ.
ಪೂಜಾಶ್ರೀ ಕೊಠಡಿಯ ಬಾಗಿಲು ಹಾಕಿ ಮಲಗುವ ಹವ್ಯಾಸ ಹೊಂದಿದ್ದಳು. ಎಂದಿನಂತೆ ಮಗಳು ಕೊಠಡಿಯ ಬಾಗಿಲು ಹಾಕಿ ಮಲಗಿದ್ದಾಳೆಂದೇ ಭಾವಿಸಿದ್ದ ಪೂಜಾಶ್ರೀಳ ತಾಯಿ ಸಂಜೆ 6 ಗಂಟೆಯಾದರೂ ಕೊಠಡಿಯ ಬಾಗಿಲು ತೆರೆಯದಿದ್ದರಿಂದ ಸಂಶಯಗೊಂಡು ಕಿಟಕಿಯ ಮೂಲಕ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಾಥಮಿಕ ತರಗತಿಯ ವಿದ್ಯಾರ್ಥಿನಿ ಆತ್ಮಹತ್ಯೆಗೈದ ವಿಷಯ ಹಬ್ಬುತ್ತಿದ್ದಂತೆ ಪ್ರಕರಣದ ಕುರಿತು ಜನರಲ್ಲಿ ನಾನಾ ಅನುಮಾನದ ಮಾತುಗಳು ಕೇಳಿ ಬಂದಿದ್ದವು.
ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಬಂಟ್ವಾಳ ಗ್ರಾಮಾಂತರ ಪೊಲೀಸರು, ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಮಾನಸಿಕ ಖಿನ್ನತೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿನಿ ಆತ್ಮಹತ್ಯೆಗೈದ ಕೊಠಡಿಯಲ್ಲಿ ಈ ಹಿಂದೆ ಅವರ ಸಂಬಂಧಿಕರೊಬ್ಬರು ಆತ್ಮಹತ್ಯೆಗೈದಿದ್ದರು. ಅಲ್ಲದೆ ಮನೆಯ ಹೊರ ಭಾಗದಲ್ಲಿ ಆಟೊರಿಕ್ಷಾ ಪಲ್ಟಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಆ ಬಳಿಕ ಬಾಲಕಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.