×
Ad

ಸುರತ್ಕಲ್ ಒಳಚರಂಡಿ ಕಾಮಗಾರಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಡಿಸಿ ಸೂಚನೆ

Update: 2016-07-12 16:58 IST

ಮಂಗಳೂರು, ಜು. 12: ಎಡಿಬಿ ಯೋಜನೆಯಡಿ ನಗರದಲ್ಲಿ ನಿರ್ಮಾಣವಾದ ಒಳಚರಂಡಿ ವ್ಯವಸ್ಥೆಗೆ ಈವರೆಗೆ 218 ಕೋಟಿ ರೂ. ಖರ್ಚು ಮಾಡಲಾಗಿದ್ದರೂ ಇದರಿಂದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದರು.

ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಮಂಗಳೂರು ಮಹಾನಗರಪಾಲಿಕೆಯ ವಿವಿಧ ಯೋಜನೆಯ ಕಾಮಗಾರಿಗಳ ಪ್ರಗತಿ ಪರೀಶೀಲನಾ ಸಭೆ ನಡೆಸಿ ಮಾತನಾಡಿದರು.

ಇತ್ತೀಚೆಗಷ್ಟೆ ಉದ್ಘಾಟನೆಗೊಂಡ ಸುರತ್ಕಲ್‌ನ ಒಳಚರಂಡಿ ವ್ಯವಸ್ಥೆಯನ್ನು ಪರಿಶೀಲನೆ ನಡೆಸದೆ ತರಾತುರಿಯಲ್ಲಿ ಉದ್ಘಾಟನೆ ಮಾಡಲಾಯಿತು. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಹೇಳಿದರು.

ಈ ಬಗ್ಗೆ ಮಾತನಾಡಿದ ಮನಪಾ ಅಧಿಕಾರಿಗಳು, ಸುರತ್ಕಲ್ ಒಳಚರಂಡಿ ವ್ಯವಸ್ಥೆಯಲ್ಲಿ ಶೇ.90 ರಷ್ಟು ಸಮಸ್ಯೆಯಿದೆ. ಈ ಭಾಗದ ಮನಪಾ ಸದಸ್ಯರು ಮುಂದೆ ಇಲ್ಲಿ ಒಳಚರಂಡಿ ವ್ಯವಸ್ಥೆ ಬೇಡ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಗುತ್ತಿಗೆದಾರರು ಕಾಮಗಾರಿ ನಿರ್ವಹಣೆ ಮಾಡಿದ ನಂತರ ಅದನ್ನು ಮನಪಾಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಮನಪಾ ಇಂಜಿನಿಯರ್‌ಗಳು ಸರಿಯಿದೆಯೆ ಎಂದು ಪರಿಶೀಲನೆ ನಡೆಸದೆ ಇರುವ ಬಗ್ಗೆ ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಮಹಾದೇವಯ್ಯ ಮಾತನಾಡಿ, ಎರಡನೆ ಹಂತದ ತುಂಬೆ ವೆಂಟೆಡ್ ಡ್ಯಾಮ್‌ನ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇನ್ನು ಪೈಂಟಿಂಗ್ ಕೆಲಸ ಬಾಕಿಯಿದ್ದು ಅಕ್ಟೋಬರ್‌ಗೆ ಪೈಂಟಿಂಗ್ ಕೆಲಸ ಆರಂಭಿಸಿ ನವೆಂಬರ್ 15ಕ್ಕೆ ಕೆಲಸ ಪೂರ್ಣಗೊಳಿಸಿ ಮನಪಾಗೆ ನೀಡಲಾಗುವುದು. ಒಂದು ವಷರ್ ಇದರ ನಿರ್ವಹಣೆಯನ್ನು ಇಲಾಖೆ ಮಾಡಲಿದೆ ಎಂದು ತಿಳಿಸಿದರು.

ಬಯೋಗ್ಯಾಸ್ ಪ್ಲಾಂಟ್‌ಗೆ 28 ಲಕ್ಷ ರೂ. ಖರ್ಚು ಮಾಡಿ ಇಬ್ಬರು ಕೆಲಸ ನಿರ್ವಹಿಸುತ್ತಿದ್ದು, ಇದರಲ್ಲಿ ದಿನಕ್ಕೆ ಕೇವಲ 1,500 ರೂ.ಗಳ ವಿದ್ಯುತ್ ಉತ್ಪಾದನೆ ನಡೆಯುತ್ತಿರುವ ಬಗ್ಗೆಯೂ ಅಕ್ಷೇಪ ವ್ಯಕ್ತಪಡಿಸಿದ ಅವರು, ಈ ಬಗ್ಗೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಪರಿಶೀಲನೆ ನಡೆಸುವಂತೆ ಸಲಹೆ ನೀಡಿದರು.

ಮುಖ್ಯ ಮಂತ್ರಿಗಳ ನಗರೋತ್ಥಾನ ಯೋಜನೆ ಹಂತ 1, 2 ಮತ್ತು 3 ಹಾಗೂ ಮೂಲಸೌಕರ್ಯ ಅಭಿವೃದ್ದಿ ಮತ್ತು ಪಾರಂಪರಿಕ ಕಟ್ಟಡಗಳ ನವೀಕರಣ ಯೋಜನೆಯಲ್ಲಿ ಬಿಡುಗಡೆಯಾದ ಅನುದಾನ ಮತ್ತು ವೆಚ್ಚದ ವಿವರಗಳ ಬಗ್ಗೆ ಪರಿಶೀಲನೆ ನಡೆಸಿದ ಅವರು ನಗರೋತ್ಥಾನ ಯೋಜನೆ 2 ರಲ್ಲಿ ಮಂಗಳೂರು ಮಹಾನರಪಾಲಿಕೆ ರಾಜ್ಯದ ಇತರ ಮಹಾನಗರಪಾಲಿಕೆಗಿಂತ ಕೊನೆಯ ಸ್ಥಾನದಲ್ಲಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮಂಗಳೂರು ಮಹಾನಗರಪಾಲಿಕೆಯಲ್ಲಿ ಬಿಡುಗಡೆ ಮೊತ್ತ ಹೋಲಿಸಿದಾಗ ಶೇಕಡವಾರು ಪ್ರಗತಿ 80 ಶೇ. ಆಗಿದ್ದರೆ ಹಂಚಿಕೆ ಮೊತ್ತ ಹೋಲಿಸಿದಾಗ ಶೇಕಡವಾರು ಪ್ರಗತಿ 40 ಆಗಿದೆ. ನಗರೋತ್ಥಾನ ಹಂತ 3 ರಲ್ಲಿ 7 ನೆ ಸ್ಥಾನದಲ್ಲಿರುವ ಮಹಾನಗರಪಾಲಿಕೆ ಬಿಡುಗಡೆ ಮೊತ್ತ ಹೋಲಿಸಿದಾಗ ಶೇಕಡವಾರು ಪ್ರಗತಿ 16 ಶೇ. ಆಗಿದ್ದರೆ ಹಂಚಿಕೆ ಮೊತ್ತ ಹೋಲಿಸಿದಾಗ ಶೇಕಡವಾರು ಪ್ರಗತಿ ಶೇ.100 ಆಗಿದೆ ಎಂದು ತಿಳಿಸಿದರು.

13 ನೆ ಹಣಕಾಸು ಆಯೋಗದ ಯೋಜನೆಯಲ್ಲಿ 2010-11 ರಿಂದ 2014-15 ರವರೆಗಿನ ಅನುದಾನ ಬಳಕೆಯಲ್ಲಿ ದ.ಕ ಜಿಲ್ಲೆ 16ನೆ ಸ್ಥಾನದಲ್ಲಿದ್ದು 67.24 ಶೇ. ಸಾಧನೆ ಮಾಡಿದೆ. ಮಂಗಳೂರು ಮಹಾನಗರಪಾಲಿಕೆಯಲ್ಲಿ ನಡೆಯದ ಅಭಿವೃದ್ದಿ ಕಾರ್ಯದಿಂದ ಈ ಸ್ಥಾನ ಬರಲು ಸಾಧ್ಯವಾಯಿತು ಎಂದು ಅಸಮಾಧಾನಗೊಂಡರು.

ನಗರದಲ್ಲಿ ನೀರಿನ ಸಮಸ್ಯೆ ಇದ್ದ ಸಂದರ್ಭದಲ್ಲಿ ನೀರಿಗಾಗಿ ತೋಡಿಸಿದ ಬೋರ್‌ವೆಲ್ ಕಾಮಗಾರಿ ಬಿಲ್ ಬಾಕಿಯಿರಿಸಿರುವ ಬಗ್ಗೆ ಮನಪಾ ಮೇಯರ್ ಹರಿನಾಥ್ ಆಕ್ಷೇಪ ವ್ಯಕ್ತಪಡಿಸಿದರು. ಇನ್ನು ಒಂದು ತಿಂಗಳಿನಲ್ಲಿ ಬಿಲ್ ಪಾವತಿ ಮಾಡಲಾಗುವುದೆಂದು ಅಧಿಕಾರಿಗಳು ತಿಳಿಸಿದರು.

ಪಂಪ್‌ವೆಲ್‌ನಲ್ಲಿ ಬಸ್ ನಿಲ್ದಾಣಕ್ಕೆ ಸಂಬಂಧಿಸಿದಂತೆ ಐಡಿಡಿಯಲ್ಲಿ ನೂತನ ಟೆಂಡರ್ ಕರೆಯಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮನಪಾ ಉಪಮೇಯರ್ ಸುಮಿತ್ರಾ ಕರಿಯ, ಸಚೇತಕ ಶಶಿಧರ್ ಹೆಗ್ಡೆ, ಕವಿತಾ ಸನಿಲ್, ಲ್ಯಾನ್ಸಿ ಲಾಟ್ ಪಿಂಟೋ, ಅಪ್ಪಿಲತಾ ಮತ್ತು ಮನಪಾ ಅಧಿಕಾರಿಗಳು ಉಪಸ್ಥಿತರಿದ್ದರು.

ಪಡೀಲ್ ರೈಲ್ವೆ ಅಂಡರ್ ಪಾಸ್ ಸರಿಪಡಿಸಲು ಇನ್ನು 4 ತಿಂಗಳು ಬೇಕು!

ಬಜಾಲ್, ಪಕ್ಕಲಡ್ಕದಿಂದ ಪಡೀಲ್‌ಗೆ ಸಂಪರ್ಕಿಸುವ ರಸ್ತೆಯ ಮಧ್ಯೆ ಇರುವ ಪಡೀಲ್ ರೈಲ್ವೆ ಅಂಡರ್‌ಪಾಸ್ ಸಂಚಾರಕ್ಕೆ ಮಕ್ತಗೊಳಿಸಲು ಇನ್ನು 3 ರಿಂದ 4 ತಿಂಗಳು ಬೇಕಾಗಬಹುದು ಎಂದು ಅಧಿಕಾರಿಗಳು ಸಭೆಗೆ ವಿವರಿಸಿದರು.

ಪಡೀಲ್ ರೈಲ್ವೆ ಅಂಡರ್ ಪಾಸ್ ನಲ್ಲಿ ವಾಹನಗಳು ಸಂಚರಿಸುವ ಜಾಗದಲ್ಲಿ ನೀರು ನಿಂತಿರುವುದರಿಂದ ಸಮಸ್ಯೆಯಾಗಿದೆ. ನೀರು ತೆಗೆಯಲು ಪಂಪ್‌ಗಳನ್ನು ಬಳಸಿದರೂ ರೈಲ್ವೆ ಕಾಮಗಾರಿಯ ಲೋಪದಿಂದ ನೀರು ಹರಿದು ಬರುತ್ತಲೆ ಇದೆ ಎಂಬ ಮಾಹಿತಿ ನೀಡಿದರು. ಇಲ್ಲಿ ಮಳೆಗಾಲದಲ್ಲಿ ಸಂಗ್ರಹವಾಗುವ ನೀರನ್ನು ಶಾಸ್ವತವಾಗಿ ಪಂಪ್ ಮಾಡಿಯೆ ತೆಗೆಯಬೇಕಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News