×
Ad

ಕಾಲೇಜು ವಿದ್ಯಾರ್ಥಿಗಳಿಗೂ ಹೈಸ್ಕೂಲ್ ಶೌಚಾಲಯ!

Update: 2016-07-12 17:32 IST

ಮಂಗಳೂರು,ಜು.12: ದ.ಕ. ಜಿಲ್ಲೆಯಲ್ಲಿರುವ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸಾಕಷ್ಟು ಶೌಚಾಲಯಗಳಿದ್ದರೂ, ಕೆಲವು ಕಡೆ ಪದವಿ ಪೂರ್ವ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಆಗದ ಕಾರಣ, ಆ ವಿದ್ಯಾರ್ಥಿಗಳು ಹೈಸ್ಕೂಲ್ ವಿದ್ಯಾರ್ಥಿಗಳ ಶೌಚಾಲಯವನ್ನೇ ಬಳಸಬೇಕಾದ ಪರಿಸ್ಥಿತಿ ಇದೆ.

ಇದು ದ.ಕ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಾಲ್ಟರ್ ಡಿಮೆಲ್ಲೋ ಅವರಿಂದ ವ್ಯಕ್ತವಾದ ಹೇಳಿಕೆ. 

ದ.ಕ. ಜಿಲ್ಲೆಯ ಎಲ್ಲಾ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಅಗತ್ಯವಾದಷ್ಟು ಪ್ರಮಾಣದಲ್ಲಿ ಶೌಚಾಲಯಗಳಿವೆ. ಆದರೆ. ಆದರೆ ಅನೇಕ ಕಡೆ ಈ ಹೈಸ್ಕೂಲ್ ಜತೆಯಲ್ಲೇ ಪದವಿಪೂರ್ವ ಹಾಗೂ ಪದವಿ ಕಾಲೇಜು ತರಗತಿಗಳನ್ನು ಆರಂಭಿಸಲಾಗಿರುವುದರಿಂದ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಶೌಚಾಲಯಗಳಿಲ್ಲ. ಆದ್ದರಿಂದ ಹೈಸ್ಕೂಲ್ ವಿದ್ಯಾರ್ಥಿಗಳು ಬಳಸುವ ಶೌಚಾಲಯಗಳನ್ನೇ ಕಾಲೇಜು ವಿದ್ಯಾರ್ಥಿಗಳು ಬಳಸುತ್ತಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ 183 ಶಾಲೆಗಳಲ್ಲಿ ಹೆಚ್ಚುವರಿ ಶೌಚಾಲಯಗಳ ಅಗತ್ಯವಿದೆ ಎಂದು ವಾಲ್ಟರ್ ಡಿಮೆಲ್ಲೋ ವಿವರ ನೀಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಸಿಎಸ್‌ಆರ್ (ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆ) ನಿಧಿ ಮತ್ತು ಉದ್ಯೋಗ ಖಾತರಿ ಯೋಜನೆ ಮೂಲಕ ಹೆಚ್ಚುವರಿ ಶೌಚಗೃಹ ನಿರ್ಮಿಸಲು ಯೋಜನೆ ರೂಪಿಸುವಂತೆ ಸಲಹೆ ನೀಡಿದರು.

ದ.ಕ.: 49 ಗ್ರಾ. ಪಂ. ಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಗುರಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2016-17ನೆ ಸಾಲಿನಲ್ಲಿ 49 ಗ್ರಾಮ ಪಂಚಾಯತ್‌ಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸುವ ಗುರಿ ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ 10 ಗ್ರಾಮ ಪಂಚಾಯತ್‌ಗಳಲ್ಲಿ ಮಾತ್ರವೇ ಜಮೀನು ಕಾದಿರಿಸಲಾಗಿದ್ದು, ಉಳಿದ ಕಡೆ ಜಮೀನು ಕಾಯ್ದಿರಿಸಲು ಸೂಕ್ತ ಕ್ರಮವನ್ನು ತಕ್ಷಣ ಕೈಗೊಳ್ಳಬೇಕೆಂದು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಮಂಗಳೂರು ತಾಲೂಕು ಪಂಚಾಯತ್‌ನ ಬೋಳಿಯೂರು ಮತ್ತು ಪಾವೂರು, ಬಂಟ್ವಾಳದ ಪಿಲಾತಬೆಟ್ಟು, ಮಾಣಿ, ಪುತ್ತೂರಿನ ಗೋಳಿತ್ತೊಟ್ಟು, ಹಿರೇಬಂಡಾಡಿ, ಕಬಕ, ಕೌಕ್ರಾಡಿ, 34 ನೆ ನೆಕ್ಕಿಲಾಡಿ, ನೆಲ್ಯಾಡಿ ಜಮೀನು ಲಭ್ಯವಾಗಿರುವ ಗ್ರಾಮ ಪಂಚಾಯತ್‌ಗಳು ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ಜಿಲ್ಲೆಯ ಎಲ್ಲಾ 230 ಗ್ರಾಮ ಪಂಚಾಯತ್‌ಗಳಲ್ಲಿ ಘನ ತ್ಯಾಜ್ಯ ವಿಲೇವಾರಿಗಾಗಿ ಕನಿಷ್ಠ ಎಂದು ಎಕ್ರೆ ಜಮೀನು ಕಾಯ್ದಿರಿಸಲು ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರ ವಿರೋಧ ಇರುವ ಕಡೆ ಜನಪ್ರತಿನಿಧಿಗಳ ಸಹಕಾರದೊಂದಿಗೆ ಅವರ ಮನವೊಲಿಸುವ ಕಾರ್ಯ ಮಾಡಬೇಕು ಸಿಇಒ ಶ್ರೀವಿದ್ಯಾ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಉಪಸ್ಥಿತರಿದ್ದರು.

98 ಶಾಲೆಗಳಲ್ಲಿ ಮಾರ್ಚ್-ಎಪ್ರಿಲ್‌ನಲ್ಲಿ ನೀರಿನ ಸಮಸ್ಯೆ!

ಜಿಲ್ಲೆಯ ಎಲ್ಲಾ ಸರಕಾರಿ ಶಾಲೆಗಳಲ್ಲೂ ಕುಡಿಯುವ ನೀರಿಗೆ ಸಂಬಂಧಿಸಿ ಸಮರ್ಪಕ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಮಾರ್ಚ್ ಮತ್ತು ಎಪ್ರಿಲ್ ತಿಂಗಳಲ್ಲಿ ಜಿಲ್ಲೆಯಾದ್ಯಂತ ನೀರಿನ ಮೂಲಗಳು ಬತ್ತಿ ಹೋಗುತ್ತಿರುವುದರಿಂದ ಜಿಲ್ಲೆಯ ಸುಮಾರು 98 ಶಾಲೆಗಳಲ್ಲಿ ಬಿಸಿಯೂಟದ ವೇಳೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬಂಟ್ವಾಳ, ಪುತ್ತೂರು ಬೆಳ್ತಂಗಡಿಗಳಲ್ಲಿ 25ರಿಂದ 30 ಶಾಲೆಗಳಲ್ಲಿ ಜಲ ಮರುಪೂರಣದ ಮೂಲಕ ಪುನಶ್ಚೇತನ ಕಾರ್ಯ ಮಾಡಲಾಗಿದೆ ಎಂದು ಡಿಡಿಪಿಐ ವಾಲ್ಟರ್ ಡಿಮೆಲ್ಲೊ ಸಭೆಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News