ಬೆಳ್ತಂಗಡಿ: ಕ್ಷುಲ್ಲಕ ಕಾರಣಕ್ಕೆ ವೈದ್ಯರ ಮೇಲೆ ತಾ.ಪಂ. ಬಿಜೆಪಿ ಸದಸ್ಯನಿಂದ ಹಲ್ಲೆ
ಬೆಳ್ತಂಗಡಿ, ಜು.12: ಕೊಕ್ಕಡ ಜೋಡುಮಾರ್ಗದಲ್ಲಿ ತನ್ನ ಮನೆ ಮತ್ತು ಕ್ಲಿನಿಕ್ ಅನ್ನು ಹೊಂದಿರುವ ಗಣೇಶ ಕ್ಲಿನಿಕ್‌ನ ವೈದ್ಯ ಡಾ. ಗಣೇಶ ಭಟ್ ಎಂಬವರು ತನ್ನ ಕ್ಲಿನಿಕ್‌ನಲ್ಲಿ ರೋಗಿಗಳನ್ನು ಆರೋಗ್ಯ ತಪಾಸಣೆ ಮಾಡುತ್ತಿದ್ದ ಸಂದರ್ಭ ಬಿಜೆಪಿ ಮುಖಂಡ ಕೊಕ್ಕಡದ ತಾ.ಪಂ.ಸದಸ್ಯ ಲಕ್ಷ್ಮೀನಾರಾಯಣ ಟಿ.ಎಂ. ಎಂಬಾತ ಕ್ಲಿನಿಕ್‌ನೊಳಗೆ ನುಗ್ಗಿ ವೈದ್ಯರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಸೋಮವಾರ ಬೆಳಗ್ಗೆ ಡಾ.ಗಣೇಶ್ ಭಟ್ ದೇವಸ್ಥಾನಕ್ಕೆ ತನ್ನ ಕಾರಲ್ಲಿ ಹೋಗುತ್ತಿರುವ ಸಂದರ್ಭ ತಾ.ಪಂ. ಸದಸ್ಯ ತನ್ನ ವಾಹನವನ್ನು ಹಿಂದಕ್ಕೆ ತೆಗೆದಾಗ ಗಣೇಶ್ ಭಟ್ ಅವರು, ನೋಡಿ ತೆಗೆಯಬಾರದೆ ಎಂದು ಕೇಳಿದ್ದರು ಎನ್ನಲಾಗಿದೆ. ಬಳಿಕ ಅಲ್ಲಿಂದ ಇಬ್ಬರೂ ತೆರಳಿದ್ದರು. ಬಳಿಕ ಇದೇ ವಿಚಾರಕ್ಕೆ ಮಧ್ಯಾಹ್ನದ ನಂತರ ಕ್ಲಿನಿಕ್‌ಗೆ ತೆರಳಿದ ತಾ.ಪಂ. ಸದಸ್ಯ ನೇರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯಿಂದ ಗಾಯಗೊಂಡ ವೈದ್ಯರು ನೆಲ್ಯಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆಯಲು ಬಂದ ಪೊಲೀಸರಿಗೆ ದೂರು ನೀಡಿದ್ದಾರೆ. ವೈದ್ಯರು ನೀಡಿರುವ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಡಿಷನಲ್ ಎಸ್ಪಿ ಡಾ. ವೇದಮೂರ್ತಿ ನೆಲ್ಯಾಡಿಯ ಆಸ್ಪತ್ರೆಯಲ್ಲಿ ಹಲ್ಲೆಗೊಳಗಾದ ವೈದ್ಯರನ್ನು ಭೇಟಿ ಮಾಡಿ ಘಟನೆಯ ವಿವರವನ್ನು ಪಡೆದುಕೊಂಡು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಘಟನೆಯನ್ನು ವಿವಿಧ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು ಜನಪ್ರತಿನಿಧಿಯೇ ಗೂಂಡಾಗಿರಿಗೆ ಮುಂದಾಗಿರುವುದು ಅತ್ಯಂತ ಶೋಚನೀಯ ವಿಚಾರವಾಗಿದ್ದು ಆರೋಪಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಡಾಕ್ಟರ್ ಗಣೇಶ್ ಭಟ್ ಮೇಲೆ ಕೊಕ್ಕಡ ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮೀ ನಾರಾಯಣ ಅವರು ಕ್ಷುಲ್ಲಕ ಕಾರಣಕ್ಕೆ ತೀವ್ರ ಹಲ್ಲೆ ನಡೆಸಿದ್ದನ್ನು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ಖಂಡಿಸಿದ್ದಾರೆ. ವೃತ್ತಿ ನಿರತ ವೈದ್ಯರ ಮೇಲೆ ಹಲ್ಲೆ ನಡೆಸುವುದು ಗಂಭೀರ ಕ್ರಿಮಿನಲ್ ಪ್ರಕರಣವಾಗಿದ್ದು, ಆರೋಪಿಯನ್ನು ತಕ್ಷಣ ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ. ಜನಪ್ರತಿನಿಧಿಯನ್ನು ತಾಲೂಕು ಪಂಚಾಯತು ಸದಸ್ಯತ್ವದಿಂದ ವಜಾಗೊಳಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.