ಬ್ಯಾರಿ ಧ್ಯೇಯಗೀತೆ ರಚನೆಗೆ ಆಹ್ವಾನ
ಮಂಗಳೂರು, ಜು. 12: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಸರಕಾರದ ನಿಯಮಾನುಸಾರ ಬ್ಯಾರಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಅಭಿವೃದ್ಧಿಗೊಳಿಸಲು ಕರ್ನಾಟಕ ಸರಕಾರವು ಅಧಿಕೃತವಾಗಿ ಘೋಷಿಸಿದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಒಳಪಟ್ಟ ಸರಕಾರಿ ಸ್ವಾಯತ್ತ ಸಂಸ್ಥೆಯಾಗಿದೆ.
ಇತರ ಭಾಷಾ ಅಕಾಡಮಿಗಳು ಧ್ಯೇಯಗೀತೆ ಅಳವಡಿಸಿಕೊಂಡಂತೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಕೂಡಾ ಧ್ಯೇಯಗೀತೆಯನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ, ಆಸಕ್ತ ಕಲಾವಿದರು, ಸಾಹಿತಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಬ್ಯಾರಿ ಭಾಷೆಯಲ್ಲಿ ಸರ್ವ ಮೌಲ್ಯಗಳನ್ನೊಳಗೊಂಡ ಧ್ಯೇಯಗೀತೆ ಯನ್ನು ರಚಿಸಿ ಬ್ಯಾರಿ ಸಾಹಿತ್ಯ ಅಕಾಡಮಿಗೆ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
2016ರ ಆಗಸ್ಟ್ ತಿಂಗಳ 5ರ ಒಳಗೆ ರಚಿಸಿದ ಬ್ಯಾರಿ ಧ್ಯೇಯಗೀತೆಯನ್ನು ಅಕಾಡಮಿಗೆ ಸಲ್ಲಿಸುವಂತೆ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಬ್ಯಾರಿ ಧ್ಯೇಯಗೀತೆಗೆ ಆಯ್ಕೆಯಾದ ಗೀತೆಗೆ ಸಂಬಂಧಿಸಿ ರಚನಾಕಾರರಿಗೆ ಸೂಕ್ತ ಗೌರವಧನವನ್ನು ನೀಡಲಾಗುವುದು ಎಂದವರು ತಿಳಿಸಿದ್ದಾರೆ.