ವಿವಾದಾಸ್ಪದ ಸಮುದ್ರದಲ್ಲಿ ಮೀನುಗಾರಿಕಾ ದೋಣಿಯನ್ನು ಮುಳುಗಿಸಿದ ಚೀನಾ: ವಿಯೆಟ್ನಾಂ ಆರೋಪ
ಹನೋಯ್, ಜು. 12: ವಿವಾದಾಸ್ಪದ ದ್ವೀಪ ಸಮೂಹವೊಂದರ ಸಮೀಪ ಚೀನಾದ ತಟರಕ್ಷಣಾ ಪಡೆಯು ತನ್ನ ಮೀನುಗಾರಿಕಾ ದೋಣಿಯೊಂದನ್ನು ಮುಳುಗಿಸಿದೆ ಎಂದು ವಿಯೆಟ್ನಾಂ ಆರೋಪಿಸಿದೆ.
ವಿಯೆಟ್ನಾಂನ ಕ್ವಾಂಗ್ ನಗಯ್ ಪ್ರಾಂತಕ್ಕೆ ಸಮೀಪದ ಸಮುದ್ರದಲ್ಲಿ ಶನಿವಾರ ಅಪರಾಹ್ನ ಚೀನಾದ ಎರಡು ತಟರಕ್ಷಣಾ ಹಡಗುಗಳು ವಿಯೆಟ್ನಾಂನ ಎರಡು ಮೀನುಗಾರಿಕಾ ದೋಣಿಗಳನ್ನು ಅಟ್ಟಿಸಿಕೊಂಡು ಹೋದವು ಎಂದು ವಿಯೆಟ್ನಾಂ ಫಿಶರಿಸ್ ಸೊಸೈಟಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಒಂದು ಮೀನುಗಾರಿಕಾ ದೋಣಿಯನ್ನು ಹತ್ತಿದ ಚೀನಿ ಸೈನಿಕರು ಅದರಲ್ಲಿದ್ದ ಐವರು ಮೀನುಗಾರರನ್ನು ಹೊಡೆದು ಸಮುದ್ರಕ್ಕೆ ಎಸೆದರು ಹಾಗೂ ಆ ದೋಣಿಯನ್ನು ಮುಳುಗಿಸಿದರು ಹಾಗು ಇನ್ನೊಂದು ದೋಣಿ ಸಮುದ್ರಕ್ಕೆ ಬಿದ್ದ ಮೀನುಗಾರರ ಬಳಿಗೆ ಹೋಗದಂತೆ ತಡೆದರು ಎಂದು ಸೊಸೈಟಿ ಆರೋಪಿಸಿದೆ.
ಕತ್ತಲೆಯವರೆಗೆ ಸಮುದ್ರದಲ್ಲೇ ಮೀನುಗಾರರು ಉಳಿಯುವಂತಾಯಿತು. ಅಂತಿಮವಾಗಿ ಎರಡನೆ ದೋಣಿ ಅವರನ್ನು ರಕ್ಷಿಸಿತು ಎಂದು ಅದು ಹೇಳಿದೆ.
ಘಟನೆಯನ್ನು ಖಂಡಿಸಿರುವ ಅದು ಚೀನಾದಿಂದ ಪರಿಹಾರ ಕೋರಿದೆ.