ಸಿಂಗಾಪುರ: ಉಗ್ರ ಕೃತ್ಯಗಳಿಗಾಗಿ ನಿಧಿ ಸಂಗ್ರಹಿಸಿದ ಆರೋಪ 4 ಬಾಂಗ್ಲಾ ಪ್ರಜೆಗಳಿಗೆ ಜೈಲು
ಸಿಂಗಾಪುರ, ಜು. 12: ತಮ್ಮ ಸ್ವದೇಶದಲ್ಲಿ ಭಯೋತ್ಪಾದನಾ ಕೃತ್ಯವೊಂದನ್ನು ನಡೆಸುವುದಕ್ಕಾಗಿ ತಾವು ಸಿಂಗಾಪುರದಲ್ಲಿ ಹಣ ಸಂಗ್ರಹಿಸಿದ್ದು ಹೌದು ಎಂಬುದನ್ನು ಒಪ್ಪಿಕೊಂಡ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳಿಗೆ ಸಿಂಗಾಪುರದಲ್ಲಿ ಎರಡರಿಂದ ಐದು ವರ್ಷಗಳ ನಡುವಿನ ಜೈಲು ವಾಸ ಶಿಕ್ಷೆಗಳನ್ನು ವಿಧಿಸಲಾಗಿದೆ.
ಶಿಕ್ಷೆಯನ್ನು ಘೋಷಿಸಿದ ಜಿಲ್ಲಾ ನ್ಯಾಯಾಧೀಶ ಕೆಸ್ಲರ್ ಸೊಹ್, ಭಯೋತ್ಪಾದನೆ ನಮ್ಮ ಸಮುದಾಯಕ್ಕೆ ಮಾತ್ರವಲ್ಲ, ಇಡೀ ಅಂತಾರಾಷ್ಟ್ರೀಯ ಸಮುದಾಯಕ್ಕೆ ದೊಡ್ಡ ಬೆದರಿಕೆಯಾಗಿದೆ ಎಂದು ಹೇಳಿದರು.
ತಮ್ಮ ತಾಯ್ನಡಿನಲ್ಲಿ ಭಯೋತ್ಪಾದನಾ ದಾಳಿ ನಡೆಸಲು ಈ ವ್ಯಕ್ತಿಗಳು ಸಿಂಗಾಪುರದಲ್ಲಿ 60 ಸಿಂಗಾಪುರ ಡಾಲರ್‌ನಿಂದ 1,360 ಸಿಂಗಾಪುರ ಡಾಲರ್‌ವರೆಗೆ ದೇಣಿಗೆಗಳನ್ನು ಸಂಗ್ರಹಿಸಿದ್ದರು ಎಂಬುದಾಗಿ ನ್ಯಾಯಾಲಯದ ದಾಖಲೆಗಳು ತೋರಿಸಿವೆ.
ಓರ್ವ ವ್ಯಕ್ತಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾದರೆ, ಇಬ್ಬರಿಗೆ ತಲಾ ಎರಡೂವರೆ ವರ್ಷ ಮತ್ತು ನಾಲ್ಕನೆಯ ವ್ಯಕ್ತಿಗೆ ಎರಡು ವರ್ಷಗಳ ಜೈಲು ವಾಸ ವಿಧಿಸಲಾಗಿದೆ.
ಈ ವ್ಯಕ್ತಿಗಳು ಇಸ್ಲಾಮಿಕ್ ಸ್ಟೇಟ್ ಆಫ್ ಬಾಂಗ್ಲಾದೇಶ್ ಎಂಬ ಸಂಘಟನೆಯನ್ನು ರಚಿಸಿತ್ತು ಹಾಗೂ ಸಶಸ್ತ್ರ ಸಂಘರ್ಷದ ಮೂಲಕ ಬಾಂಗ್ಲಾದೇಶ ಸರಕಾರವನ್ನು ಉರುಳಿಸುವ ಯೋಜನೆಯನ್ನೂ ಹೊಂದಿತ್ತು ಎಂದು ಸರಕಾರಿ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.